ಮನಪಾ ಬಜೆಟ್ ಪೂರ್ವಭಾವಿ ಸಭೆ | ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆ: ದ.ಕ. ಜಿಲ್ಲಾಧಿಕಾರಿ ನಿರಾಸೆ
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು: ಮಹಾನಗರ ಪಾಲಿಕೆಯ 2026-27ನೆ ಸಾಲಿನ ಬಜೆಟ್ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಸುತ್ತಿನ ಸಾರ್ವಜನಿಕ ಸಭೆ ಸೋಮವಾರ ನಡೆದಿದ್ದು, ಸಭೆಯಲ್ಲಿ ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆಗೆ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ನಿರಾಸೆ ವ್ಯಕ್ತಪಡಿಸಿದರು.
ಸಭೆಗೆ ನೋಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಭೆಯಲ್ಲಿ ಸರಕಾರೇತರ ಸಂಘ ಸಂಸ್ಥೆಗಳ ಕೆಲ ಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಕೇವಲ 12 ಮಂದಿ ಮಾತ್ರವೇ ಭಾಗವಹಿಸಿದ್ದರು. ನಿಕಟಪೂರ್ವ ಜನಪ್ರತಿನಿಧಿಗಳ ಕೊರತೆಯೂ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಲು ಭಾಗವಹಿಸಿದವರ ಸಂಖ್ಯೆ ಕಡಿಮೆಯಾಗಿದೆ. 2ನೆ ಸುತ್ತಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪಾಲಿಕೆಯ ಬಜೆಟ್‌ಗೆ ಸಂಬಂಧಿಸಿ ಸಲಹೆಗಳನ್ನು ನೀಡಬೇಕೆಂದು ಕರೆ ನೀಡಿದರು.
ಕೆರೆ, ಪಾರ್ಕ್‌ಗಳ ಅಭಿವೃದ್ದಿ ಬಳಿಕ ನಿರ್ವಹಣೆ ಆಗುತ್ತಿಲ್ಲ!
ನಗರದ ಹಲವು ಕಡೆ ಪಾರ್ಕ್, ಕೆರೆಗಳು ಮುಡಾದಿಂದ ಅಭಿವೃದ್ಧಿ ಆದರೂ ನಿರ್ವಹಣೆ ಆಗದೆ, ಜನರ ತೆರಿಗೆಯ ಕೋಟ್ಯಂತರ ರೂ. ಪೋಲಾಗುತ್ತಿದೆ ಎಂದು ಸಾರ್ವಜನಿಕರ ಪರವಾಗಿ ಜಿ.ಕೆ. ಭಟ್ ಅಸಮಾಧಾನ ವ್ಯಕ್ತಪಡಿಸಿದರು.
ಮುಡಾ ಹಾಗೂ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಆದ ಕಾಮಗಾರಿಗಳ ನಿರ್ವಹಣೆ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ನಗರದ ವಿವಿಧ ಕಡೆಯ 28 ಕೆರೆಗಳು, 16 ಪಾರ್ಕ್‌ಗಳು ಅಭಿವೃದ್ದಿ ಮಾಡಲಾಗಿದೆ. ಅವುಗಳನ್ನು ಮನಪಾಕ್ಕೆ ಹಸ್ತಾಂತರ ಮಾಡುವ ಸಂದರ್ಭ ನಿರ್ವಹಣೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಗೆತ್ತಿಗೊಳ್ಳುವ ಸಂದರ್ಭದವಲ್ಲಿಯೇ ಟೆಂಡರ್ ವಹಿಸುವವರೇ ಮೂರಿಂದ ಐದು ವರ್ಷಗಳ ನಿರ್ವಹಣೆಗೆ ಷರತ್ತು ವಿಧಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಉತ್ತರಿಸಿದರು.
ಪಚ್ಚನಾಡಿಯಲ್ಲಿ ಸಂಗ್ರಹವಾಗಿರುವ ಸಾಂಪ್ರದಾಯಿಕ ಕಸ (ಹಳೆ ಕಸ) ವಿಲೇವಾರಿಗೆ ಸಂಬಂಧಿಸಿ ಸಾರ್ವಜನಿಕರೊಬ್ಬರ ಸಲಹೆ ಕುರಿತಂತೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಸಾಂಪ್ರದಾಯಿಕ ಕಸವನ್ನು ಗುತ್ತಿಯಡಿ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆಯಿಂದ ವಿಲೇ ಕಾರ್ಯ ತಡವಾಗಿದ್ದು, ಈಗ ಮತ್ತೆ ವೇಗ ಪಡೆದಿದೆ. ಸಂಗ್ರಹವಾಗಿದ್ದ 9 ಲಕ್ಷ ಟನ್ ಕಸದಲ್ಲಿ 6.5 ಲಕ್ಷ ಟನ್ ಇನ್ನು ಕ್ಲಿಯರ್ ಮಾಡಬೇಕಿದ್ದು, 18 ತಿಂಗಳ ಕಾಲಾವಕಾಶವಿದೆ ಎಂದರು.
ಸಭೆಯಲ್ಲಿ ಎಸ್.ಎಲ್. ಪಿಂಟೋ, ರಾಜೇಂದ್ರ ಕುಮಾರ್, ರಾಧಾಕೃಷ್ಣ ಅವರು ಸಲಹೆ ನೀಡಿದರು.
ಪಾಲಿಕೆ ಕಂದಾಯ ಅಧಿಕಾರಿ ಅಕ್ಷತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುವರ್ಣ ಕರ್ನಾಟಕ ಸರಕಾರೇತರ ಸಂಸ್ಥೆಯ ಎನ್.ಪಿ. ಶೆಣೈ ಮಾತನಾಡಿ, ಕಂದಾಯ ವಿಭಾಗದಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಕಟ್ಟಡ ಪರವಾನಿಗೆ ಪಡೆಯುವ ಸಂದರ್ಭ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆಗೆ ಪ್ರತ್ಯೇಕ ಪರವಾನಿಗೆ ಪಡೆಯಬೇಕು. ಆದರೆ ಶೇ. 50ರಷ್ಟು ಮಂದಿ ಈ ಪರವಾನಿಗೆ ಪಡೆಯುವುದಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಸಂದರ್ಭ ಹಿಂದಿನ ವರ್ಷಗಳ ತೆರಿಗೆ ಬಾಕಿಗಾಗಿ ದಂಡವೇ ಕೆಲವು ಸಾವಿರ ರೂ.ಗಳಲ್ಲಿ ಬರುತ್ತದೆ. ಈ ರೀತಿಯಾಗಿ ತೆರಿಗೆ ಕಟ್ಟಲು ಸಾಕಷ್ಟು ಮಂದಿ ಬಾಕಿ ಇರಿಸುತ್ತಿದ್ದು, ಇದರಿಂದ ಪಾಲಿಕೆಗೆ ಆದಾಯ ಸೋರಿಕೆಯಾಗುತ್ತಿದೆ. ರಾಜಕಾಲುವೆ ಒತ್ತುವರಿ, ಮಳೆಗಾಲದಲ್ಲಿ ಟ್ಯಾಂಕರ್ ನೀರು ಬಳಕೆ ಮೊದಲಾದವುಗಳಿಂದ ಪಾಲಿಕೆಗೆ ತೆರಿಗೆ ಸೋರಿಕೆ ಬಗ್ಗೆ ಗಮನ ಸೆಳೆದರು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಪಾಲಿಕೆಯಿಂದಾಗುತ್ತಿರುವ ತೆರಿಗೆ ಸೋರಿಕೆಯ ಜತೆಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಬಜೆಟ್ ಪೂರ್ವಭಾವಿ ಸಭೆ ಅಹವಾಲು ಸಭೆಯಾಗಿ ಮಾರ್ಪಟ್ಟಿತು.
ಸಭೆಯಲ್ಲಿ ವ್ಯಕ್ತವಾದ ಇತರ ಪ್ರಮುಖ ಸಲಹೆಗಳು
► ಪಾಲಿಕೆ ವ್ಯಾಪ್ತಿಯ ಮಾರಕುಟ್ಟೆಗಳಲ್ಲಿ ಬಡ ವ್ಯಾಪಾರಿಗಳಿಗೆ ಅನುಕೂಲ ಆಗುವ ರೀತಿಯ ವ್ಯವಸ್ಥೆ ಕಲ್ಪಿಸಬೇಕು. ಮಾರುಕಟ್ಟೆ ಕಾಂಪ್ಲೆಕ್ಸ್‌ಗಳಲ್ಲಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸಬೇಕು- ಸುರೇಶ್ ನಾಯಕ್.
►ತ್ಯಾಜ್ಯ ನಿರ್ವಹಣೆಗೆ ಕ್ಯೂಆರ್ ಕೋಡ್ ಮನೆಗಳಲ್ಲಿ ಹಾಕಲಾಗಿದ್ದರೂ ಅದು ಬಳಕೆಯಾಗುತ್ತಿಲ್ಲ. ಇದರಿಂದಾಗಿ ತ್ಯಾಜ್ಯ ವಿಂಗಡನೆ ಮಾಡದವರಿಗೆ ದಂಡ ವಿಧಿಸಬಹುದು- ಅಶ್ವಿನಿ ಭಟ್.
►ದಾನಪತ್ರ ಪಡೆದು ಪಾಲಿಕೆಗೆ ಜಾಗ ನೀಡಿದ್ದರೂ ಬಳಿಕ ಆ ಜಾಗವನ್ನು ಅತಿಕ್ರಮಣ ಮಾಡಿ ಅಂಗಡಿ, ತೋಟ ಮಾಡುವವರಿಗೆ ದಂಡ ಹಾಕಬೇಕು. ಒಂದೇ ಡೋರ್‌ನಿಂದ ಕಟ್ಟಡದ ಹಲವು ಮನೆ, ವಾಣಿಜ್ಯ ಸಂಕೀರ್ಣಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸಿ ತೆರಿಗೆ ತಪ್ಪಿಸುತ್ತಿರುವುದನ್ನು ಪತ್ತೆ ಹಚ್ಚಬೇಕು- ಆಲ್ವಿನ್ ಡಿಸೋಜಾ.
‘ಮುಂದುವರಿದ ಜಿಲ್ಲೆಗಳಲ್ಲಿ ಒಂದಾದ ದ.ಕ. ಜಿಲ್ಲೆಯಲ್ಲಿಯೇ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಬ್ಲ್ಯಾಕ್ ಸ್ಪಾಟ್‌ಗಳನ್ನು ಪತ್ತೆಹಚ್ಚಲು ಸಿಸಿಕ್ಯಾಮರಾ ಅಳವಡಿಸುವ ಪ್ರಮೇಯ ಬಂದಿರುವುದು ನಾಚಿಕೆಗೇಡಿನ ವಿಚಾರ. ಜನರು ಅವರಾಗಿಯೇ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆ ವಾಹನಗಳಿಗೆ ಒದಗಿಸಬೇಕು. ಆದರೆ ಹಾಗೆ ಮಾಡದ ಕಾರಣ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಸ ಸಂಗ್ರಾಹಕರು ಕೆಲ ಮನೆಗಳ ಎದುರಲ್ಲೇ ಕಸವನ್ನು ಸುರಿದು ಬೇರ್ಪಡಿಸಿಕೊಂಡು ಹೋಗುತ್ತಾರೆ. ಇದಕ್ಕಾಗಿ ಕೆಲವರು ಎಲ್ಲೆಂದರಲ್ಲಿ ಕಸವನ್ನು ಸುರಿಯುತ್ತಾರೆ. ಈ ಬಗ್ಗೆ ಜನರಲ್ಲಿಯೇ ಜಾಗೃತಿ ಮೂಡುವುದು ಅಗತ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.