×
Ad

Mangaluru | ಡಿ.3ರಂದು ಕೊಣಾಜೆಯಲ್ಲಿ ಐತಿಹಾಸಿಕ ಸಂವಾದ, ಸರ್ವಮತ ಸಮ್ಮೇಳನದ ಶತಮಾನೋತ್ಸವ

Update: 2025-11-28 17:15 IST

ಮಂಗಳೂರು, ನ.28: ವರ್ಕಳದ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ ಡಿ.3ರಂದು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ, ಗುರುವಿನ ಮಹಾ ಸಮಾಧಿ ಶತಾಬ್ಧಿ ಮತ್ತು ಸರ್ವಮತ ಸಮ್ಮೇಳನ ಶತಮಾನೋತ್ಸವ ನಡೆಯಲಿದೆ.

ಸರ್ವ ಧರ್ಮಗಳು ಮತ್ತು ಸರ್ವ ಸಮುದಾಯಗಳ ಜನರನ್ನೂ ಒಳಗೊಳ್ಳುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಆಶೀರ್ವಚನ ನೀಡುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಸಂದೇಶದ ಪ್ರಧಾನ ಭಾಷಣ ಮಾಡುವರು. ಶಿವಗಿರಿ ಮಠದ ಕಾರ್ಯದರ್ಶಿ ಸ್ವಾಮೀಜಿ ಶುಭಾಂಗಾನಂದ ಪರಿನಿರ್ವಾಣ ಸಂದೇಶ ಭಾಷಣ ನೀಡುವರು. ಶಿವಗಿರಿ ಮಠದ ಶಾರದಾನಂದ, ಸ್ವಾಮಿ ರಿತಾಂಭರಾನಂದ, ಸ್ವಾಮಿ ಆಸಂಗಾನಂದ ಗಿರಿ, ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾನಂದಜಿ ಮಹಾರಾಜ ಉಪಸ್ಥಿತರಿರುವರು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬಿಜೇಶ್ ಚೌಟ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪಾಣಕ್ಕಾಡ್ ಮುನಾವರ್ ಅಲಿ ತಂಞಳ್, ಮಂಗಳೂರು ಬಿಷಪ್ ಡಾ.ಪೀಟರ್ ಪಾಲ್ ಸಲ್ಡಾನ, ಬೆಳ್ತಂಗಡಿ ಬಿಷಪ್ ಜೇಮ್ಸ್ ಪಟ್ಟೆರಿಲ್, ಬ್ರಹ್ಮಕುಮಾರಿ ವೀಣಾ ಬೆಹನ್ಜಿ, ಗೋಕುಲಂ ಗ್ರೂಪ್ ಅಧ್ಯಕ್ಷ ಗೋಕುಲ್, ಗೋಪಾಲನ್, ಕೆ.ಜಿ. ಬಾಬು ರಾಜ್ ಬಹರೇನ್, ರಾಜಧಾನಿ ಗ್ರೂಪ್ ಅಧ್ಯಕ್ಷ ಡಾ.ಬಿಜು ರಮೇಶ್, ಮೆಡಿಮಿಕ್ಸ್ ಅಧ್ಯಕ್ಷ ಎ.ವಿ.ಅನೂಪ್, ಕೇರಳದ ಮಾಜಿ ಡಿಜಿಪಿ ಟಿ.ಪಿ.ಸೆನ್ಕುಮಾರ್, ಶಾಸಕರಾದ ವಿ.ಸುನಿಲ್ ಕುಮಾರ್, ಉಮಾನಾಥ ಎ.ಕೋಟ್ಯಾನ್ ಮತ್ತು ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ. ಕುಂದರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸರ್ವಮತ ಸಮ್ಮೇಳನ :

ಅಂದು ಮಧ್ಯಾಹ್ನ 2ರಿಂದ 4ರವರೆಗೆ ಸರ್ವಮತ ಸಮ್ಮೇಳನ ನಡೆಯಲಿದೆ. ಖ್ಯಾತ ಸಂಸ್ಕೃತಿ ಚಿಂತಕ ಗಣೇಶ ದೇವಿ ಸಮ್ಮೇಳನ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮತ್ತು ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸುವರು. ಶಿವಗಿರಿ ಮಠದ ಸ್ವಾಮಿ ರಿತಾಂಭರಾನಂದ ಸರ್ವಮತ ಸಂದೇಶ ಭಾಷಣ ನೀಡುವರು ಎಂದು ಕಾರ್ಯಕ್ರಮ ಆಯೋಜನೆಯ ಕೇಂದ್ರ ಸಮಿತಿ ಸಂಚಾಲಕ ಪಿ.ವಿ.ಮೋಹನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News