ಮಂಗಳೂರು| ಮಾದಕ ವಸ್ತು ವಿರುದ್ಧ ಪೊಲೀಸರಿಂದ ಕಾರ್ಯಾಚರಣೆ: ಕಾಲೇಜು ವಿದ್ಯಾರ್ಥಿಗಳ ತಪಾಸಣೆ
ಕೊಣಾಜೆ: ಮಾದಕ ವಸ್ತು ಮುಕ್ತ ಮಂಗಳೂರು ಮತ್ತು ಮಾದಕ ವಸ್ತು ಮುಕ್ತ ಶೈಕ್ಷಣಿಕ ಕ್ಯಾಂಪಸ್‌ಗಳ ನಿರ್ಮಾಣದ ಉದ್ದೇಶದಿಂದ ಪೊಲೀಸರು ಮಾದಕ ವಸ್ತು ವಿರುದ್ಧ ಅಭಿಯಾನವನ್ನು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಉಳ್ಳಾಲ, ಕೊಣಾಜೆ ವ್ಯಾಪ್ತಿಯ ಹಲವು ಕಾಲೇಜಿನ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಮಾದಕ ವಸ್ತು ಪರೀಕ್ಷೆ ನಡೆಸಿದರು.
ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕಾಲೇಜು ಬಸ್‌ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಮೂಲಕ ಕಾರ್ಯಾಚರಣೆಯನ್ನು ನಡೆಸಲಾಯಿತು.
ಕೊಣಾಜೆ, ಉಳ್ಳಾಲ ಠಾಣೆ ವ್ಯಾಪ್ತಿಯ ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್. ಹೆಗ್ಡೆ), ಕಣಚೂರು ಸಂಸ್ಥೆ, ಪಿ.ಎ. ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಖಾಸಗಿ ಬಸ್‌ಗಳು ಮತ್ತು ಕಾಲೇಜು ಬಸ್ ಗಳಲ್ಲಿ ಹೋಗುವ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲಾಯಿತು.
ಇದುವರೆಗೆ ಒಟ್ಟು 103 ಪರೀಕ್ಷೆಗಳು ಪೂರ್ಣಗೊಂಡಿವೆ, ಅವುಗಳಲ್ಲಿ 101 ನಕಾರಾತ್ಮಕವಾಗಿವೆ. ಪ್ರಸ್ತುತ ಹತ್ತು ಪರೀಕ್ಷೆಗಳು ಪ್ರಗತಿಯಲ್ಲಿವೆ, ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾರ್ಯ ವಿಧಾನದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇತರ ಎಲ್ಲಾ ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದಿತ್ತು . ಒಟ್ಟಾರೆಯಾಗಿ ಪೊಲೀಸ್, ನಾಗರಿಕ ಆಡಳಿತ, ಮಾಧ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ನಿರಂತರ ಪ್ರಯತ್ನಗಳಿಂದ ಮಾದಕ ವಸ್ತು ವಿರುದ್ಧದ ಅಭಿಯಾನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.