ಮಂಗಳೂರು| ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ, ದಂಡ
ಮಂಗಳೂರು, ಆ.23: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ (20) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-2)ವು 20 ವರ್ಷಗಳ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂ. ದಂಡ ವಿಧಿಸಿದೆ.
ನ್ಯಾಯಾಧೀಶ ಮಾನು ಕೆ.ಎಸ್. ಶನಿವಾರ ಈ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಮುಲ್ಕಿ ಕಾರ್ನಾಡು ಲಿಂಗಪ್ಪಯ್ಯ ಕಾಡಿನ ಬಿಜಾಪುರ ಕಾಲನಿ ನಿವಾಸಿ ಸಮೀರ್ ಎಂಬಾತ ಅಪ್ರಾಪ್ತ ಬಾಲಕಿಯ ತಾಯಿ ನಡೆಸುತ್ತಿದ್ದ ಹೊಟೇಲ್‌ಗೆ ಕೋಳಿ ಮಾಂಸದ ಲೈನ್‌ಸೇಲ್ ಮಾಡುತ್ತಿದ್ದ. ಬಾಲಕಿ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿದ್ದಳು. ಈ ವೇಳೆ ಬಾಲಕಿಯನ್ನು ಪರಿಚಯ ಮಾಡಿಕೊಂಡ ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದ ಎಂದು ಆರೋಪಿಸಲಾಗಿತ್ತು.
2024ರ ಜೂ.24ರಂದು ಬಾಲಕಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಅಲ್ಲಿಂದ ಕಾರಿನಲ್ಲಿ ಆಕೆಯನ್ನು ಚಿತ್ರದುರ್ಗಕ್ಕೆ ಮತ್ತು ಬಸ್ಸಿನಲ್ಲಿ ಬೆಂಗಳೂರಿಗೆ ಕರೆದು ಕೊಂಡು ಹೋಗಿದ್ದ. ನಂತರ ಖಾಸಗಿ ಬಸ್ಸಿನಲ್ಲಿ ಮುಂಬೈಗೆ ಕರೆದೊಯ್ದಿದ್ದ. ಅಲ್ಲಿ ಬಾಡಿಗೆ ಮನೆ ಹುಡುಕಾಟ ನಡೆಸಿ ಸಿಗದಿದ್ದಾಗ ಮತ್ತೆ ಬೆಂಗಳೂರಿಗೆ ತೆರಳಿ, ಅಲ್ಲಿಂದ ಮತ್ತೆ ಮಂಗಳೂರು ಸರಕಾರಿ ಬಸ್ ನಿಲ್ದಾಣ ತಲುಪಿದ್ದ.
ಅಲ್ಲಿ ಹಾಜರಿದ್ದ ಸುರತ್ಕಲ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆಗಿನ ಸುರತ್ಕಲ್ ಇನ್‌ಸ್ಪೆಕ್ಟರ್ ರಘು ನಾಯ್ಕ್ ಮತ್ತು ಎಸ್ಸೈ ಮಹೇಶ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2 ಕೋರ್ಟ್‌ನ ನ್ಯಾಯಾಧೀಶ ಮನು ಕೆ.ಎಸ್. ವಿಚಾರಣೆ ನಡೆಸಿದ್ದರು. ಶನಿವಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಕಲಂ376 (2) (ಎನ್) ಮತ್ತು ಪೊಕ್ಸೊ ಕಾಯ್ದೆ ಕಲಂ- 6ರಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ಕಟ್ಟಲು ವಿಫಲನಾದರೆ 4 ತಿಂಗಳು ಹೆಚ್ಚುವರಿ ಸಾದಾ ಸಜೆ. ಐಪಿಸಿ ಕಲಂ 363ರಡಿ 3 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ವಿಫಲನಾದರೆ 1 ತಿಂಗಳು ಹೆಚ್ಚುವರಿ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಂಡದ ಮೊತ್ತ 55 ಸಾವಿರ ರೂ. ಮತ್ತು ಕಾನೂನು ಸೇವಾ ಪ್ರಾಧಿಕಾರ ಹೆಚ್ಚುವರಿಯಾಗಿ 3.45 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ 1.5 ಲಕ್ಷವನ್ನು ತಕ್ಷಣ ಪಾವತಿಸಬೇಕು ಮತ್ತು 2.5 ಲಕ್ಷ ರೂ. ವನ್ನು ಸಂತ್ರಸ್ತೆ ಹೆಸರಿನಲ್ಲಿ 3 ವರ್ಷ ಎಫ್‌ಡಿ ಇಡುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ಎರಡನೇ ಆರೋಪಿ ಶಿವಮೊಗ್ಗದ ಲಾಡ್ಜ್‌ನ ರಿಸೆಪ್ಶನಿಸ್ಟ್ ನಾಗರಾಜ್‌ನನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದ ಮಂಡಿಸಿದ್ದರು.