×
Ad

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಬೇಜವಾಬ್ದಾರಿತನ; ಆರೋಪ

Update: 2025-05-27 12:00 IST

ವಿಟ್ಲ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಆಂಧ್ರಪ್ರದೇಶದ ಕೆಎನ್‌ಆರ್ ಕಂಪೆನಿಯ ಬೇಜವಾಬ್ದಾರಿತನದ ಕೆಲಸಗಳಿಂದ ಮಾಣಿ ಸೂರಿಕುಮೇರು ಮಧ್ಯೆ ಹಲವಾರು ಅವಾಂತರಗಳು ಸೃಷ್ಠಿಯಾಗಿರುವ ಬಗ್ಗೆ ವರದಿಯಾಗಿದೆ.

ರಾಜ್ ಕಮಲ್ ಹಾಲ್ ಬಳಿ ಮತ್ತು ಟಿಕ್ಕಾ ಪಾಯಿಂಟ್ ಹೋಟೆಲ್ ಸಮೀಪ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯದೇ ಇರುವುದರಿಂದ ಮಳೆಯ ನೀರೆಲ್ಲಾ ರಸ್ತೆಯಲ್ಲೇ ತುಂಬಿ ಕೃತಕ ಹೊಳೆ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಅದೇ ರೀತಿ ಅವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ಮಾಡಿ ಅದರ ಗ್ಯಾಪ್‌ಗೆ ಮಣ್ಣು ತುಂಬಿಸದೆ ಹಾಗೇ ಬಿಟ್ಟಿರುವುದರಿಂದ ಹಳೀರದ ಮಾನಸ ತೆಂಗಿನ ಎಣ್ಣೆಯ ಮಿಲ್ ಸಮೀಪ ಎತ್ತರದಲ್ಲಿ ಇರುವ ಮೂರು ಕರೆಂಟ್ ಕಂಬಗಳು ಆಧಾರ ಸಾಕಾಗದೆ ಕೆಳಗೆ ಉರುಳಿ ಬೀಳುವ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

ಹಳೀರದಿಂದ ಪಟ್ಲಕೋಡಿ ಸಂಪರ್ಕದ ರಸ್ತೆಯ ಪ್ರವೇಶ ರಸ್ತೆಯನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ರಿಪೇರಿ ಮಾಡಿ ಹೋಗುವುದರಿಂದ ಯಾವುದೇ ವಾಹನಗಳು ಹೋಗದ ಪರಿಸ್ಥಿತಿ ಇದೆ. ರಸ್ತೆಗೆ ಕಾಂಕ್ರೀಟ್ ಅಥವಾ ಡಾಮರು  ಹಾಕದೇ ಇರುವುದರಿಂದ ಒಂದೇ ಮಳೆಗೆ ರಸ್ತೆ ಕರಗಿ ಹೋಗುತ್ತವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯನ್ನು ಆ ಭಾಗದ ಜನರು ಅನುಭವಿಸುತ್ತಿದ್ದು ರೋಗಿಗಳು,ವಯೋವೃದ್ಧರು,ಮಕ್ಕಳು ಪಡುತ್ತಿರುವ ಸಂಕಷ್ಟಗಳ ಹೊಣೆ ಯಾರು? ರಸ್ತೆ ಬದಿ ವಾಹನ ನಿಲ್ಲಿಸಿ ನಡೆದುಕೊಂಡೇ ಹೋಗುವ ಪರಿಸ್ಥಿತಿಯನ್ನು ಮೂರು ವರ್ಷಗಳಲ್ಲಿ ಸರಿ ಮಾಡಲು ಆಗಲಿಲ್ಲವೇ ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಳೀರ ಎಂಬಲ್ಲಿ ಖತೀಜಮ್ಮ ಎಂಬವರ ಮನೆಗೆ ಅರ್ಧ ತಡೆಗೋಡೆ ಮಾಡಿ ಅನ್ಯಾಯ ಮಾಡಲಾಗಿದೆ. ಅವರ ಮನೆ ಬೀಳುವ ಹಂತದಲ್ಲಿದೆ. ಎಷ್ಟೊಂದು ವಿಳಂಬ ಕೆಲಸಗಳೆಂದರೆ ಮಾಣಿಯಲ್ಲಿ ಹೊಂಡ ತೆಗೆಯುವುದು, ಪೆರತನೆಯಲ್ಲಿ ಹೋಗೆ ಕೆಲಸ ಮಾಡುವುದು. ಮತ್ತೆ ಎರಡು ವರ್ಷ ಬಿಟ್ಟು ಮಾಣಿಯಲ್ಲಿ ಕೆಲಸ ಮಾಡಲು ಬರುವುದು. ಇಂತಹ ಅವೈಜ್ಞಾನಿಕ ಕೆಲಸ ಮಾಡಿ ಜನರನ್ನು ಮತ್ತು ವಾಹನ ಚಾಲಕರನ್ನು ಸಂಕಷ್ಟಪಡಿಸುವುದೇ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರಿಗೆ ಮಾಮೂಲು ಆಗಿ ಬಿಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ..

ಕೆಎನ್‌ಆರ್ ಕಂಪನಿಯ ಬೇಜವಾಬ್ದಾರಿ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ನಡೆಸಿ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News