ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ ವಜಾಕ್ಕೆ ಸರಕಾರಕ್ಕೆ ಪತ್ರ: ಮೇಯರ್ ಸುಧೀರ್ ಶೆಟ್ಟಿ
ಮೇಯರ್ ಸುಧೀರ್ ಶೆಟ್ಟಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಎದುರು ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ ಬಸ್ಸಿಗೆ ಕಲ್ಲೆಸೆದಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಜನ ಸೇವಕರನ್ನು ಆಯ್ಕೆ ಮಾಡುವಾಗ ಇಂತಹ ಗೂಂಡಾ ಪ್ರವೃತ್ತಿ ಬಗ್ಗೆ ಸರಕಾರವೂ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಕಿಶೋರ್ ಶೆಟ್ಟಿಯ ಸದಸ್ಯತ್ವವನ್ನು ವಜಾಗೊಳಿಸಲು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದ್ದಾರೆ.
ಮನಪಾ ಸಾಮಾನ್ಯ ಸಭೆ ಮೊಟಕುಗೊಂಡ ಬಳಿಕ ಮೇಯರ್ ಕೊಠಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಸ್ಸಿಗೆ ಕಲ್ಲು ಹೊಡೆಯವುದು, ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿ ಸದನಕ್ಕೆ ಅಡ್ಡಿಪಡಿಸಿ ಮೇಯರ್ ಪೀಠದೆದುರು ಮೈಕ್ ಎಸೆದು ಅಗೌರವ ತೋರಿಸುತ್ತಿರುವ ಜನಪ್ರತಿನಿಧಿಗಳ ವರ್ತನೆಯನ್ನು ಜನರು ಗಮನಿಸಬೇಕು. ಕಾಂಗ್ರೆಸ್ ನಾಯಕರು ಯಾವ ರೀತಿ ಗೂಂಡಾ ಪ್ರವೃತ್ತಿ ತೋರಿಸಿದ್ದಾರೆ ಎಂಬುದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರಿಸಲಿದ್ದಾರೆ ಎಂದರು.
ಬಹಳಷ್ಟು ವರ್ಷಗಳಿಂದ ಸದನ ನಡೆದುಕೊಂಡು ಬಂದಿದೆ. ಆದರೆ ಸಭೆಯಲ್ಲಿ ವಿಪಕ್ಷ ನಾಯಕನಿಗೆ ಮೊದಲು ಮಾತ ನಾಡಲು ಅವಕಾಶ ನೀಡಬೇಕು ಎಂದು ಎಲ್ಲೂ ಕಾನೂನು ಇಲ್ಲ. ನಮ್ಮ ಸಾಧನೆಯನ್ನು ಹೇಳುವುದು ಸಂಪ್ರದಾಯ. ಅದು ನನ್ನ ಹಕ್ಕು. ಅದನ್ನು ಪ್ರಶ್ನಿಸುವ ಹಕ್ಕು ವಿಪಕ್ಷದವರಿಗೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಮೇಯರ್ ಪ್ರತಿಕ್ರಿಯಿಸಿದರು.
ಮುಂದಿನ ಪಾಲಿಕೆ ಚುನಾವಣೆಗೆ ಸಂಬಂಧಿಸಿ ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಸೆ. ೮ರವರೆಗೆ ಅಧಿಕಾರ ಅವಧಿ ಇದ್ದು, ಇನ್ನೊಂದು ಸಭೆಯನ್ನು ಮಾಡಲು ಅವಕಾಶವಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.