×
Ad

ಮೀಫ್ : ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ

Update: 2025-11-08 19:40 IST

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಕೇಂದ್ರ ಸಮಿತಿ, ದ. ಕ. ಜಿಲ್ಲೆ ಮಂಗಳೂರು ಇದರ ಆಶ್ರಯದಲ್ಲಿ ನ.6ರಂದು ಉಡುಪಿಯ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಮುಸ್ಲಿಂ ವಿದ್ಯಾ ಸಂಸ್ಥೆಗಳ ಸಭೆ ನಡೆಯಿತು.

ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ದಿಕ್ಸೂಚಿ ಭಾಷಣಗೈದ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಉಮರ್ ಟಿ.ಕೆ. ರವರು ಮೀಫ್ ಸ್ಥಾಪನೆಗೊಂಡ ಉದ್ದೇಶವನ್ನು ವಿವರಿಸಿ ಸಮುದಾಯವು ಸರ್ವಾಂಗೀಣ ಅಭಿವೃದ್ಧಿಗೊಳ್ಳಬೇಕಾದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವುದು ಇಂದಿನ ಬೇಡಿಕೆಯಾಗಿದೆ ಎಂದರು.

ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು ಮೀಫ್ ಹಮ್ಮಿಕೊಂಡ ವಿವಿಧ ಯೋಜನೆಗಳನ್ನು ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಮೀಫ್ ನೀಡುತ್ತಿರುವ ಪ್ರೋತ್ಸಾಹವನ್ನು ವಿವರಿಸಿದರು.

ಈ ಸೌಲಭ್ಯಗಳನ್ನು ಉಡುಪಿ ಜಿಲ್ಲೆಗೂ ವಿಸ್ತರಿಸಿ, ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದಲ್ಲಿ, ಉಡುಪಿ ಜಿಲ್ಲೆಗೆ ಮೀಫ್‌ನ ಪ್ರತ್ಯೇಕ ಘಟಕ ಸ್ಥಾಪಿಸಬೇಕಾದ ಅಗತ್ಯವನ್ನು ವಿವರಿಸಿದರು.

ಗೌರವಾಧ್ಯಕ್ಷರಾಗಿ ಎಂಇಟಿ ವಿದ್ಯಾಸಂಸ್ಥೆಯ ಶಬೀ ಅಹ್ಮದ್ ಖಾಝಿ, ಅಧ್ಯಕ್ಷರಾಗಿ ಸ್ವಾಲಿಹಾತ್ ವಿದ್ಯಾ ಸಂಸ್ಥೆ, ಹೂಡೆಯ ಮುಹಮ್ಮದ್ ಮೌಲಾ, ಉಪಾಧ್ಯ್ಯಕ್ಷರುಗಳಾಗಿ ಬ್ಯಾರೀಸ್ ಕೋಡಿ ಕುಂದಾಪುರದ ಅಬ್ದುಲ್ ರಹಿಮಾನ್ ಬ್ಯಾರಿ ಮತ್ತು ಅಲ್ ಅಝರ್ ವಿದ್ಯಾ ಸಂಸ್ಥೆ ಹೆಜಮಾಡಿಯ ಜಿ. ಶೇಖಬ್ಬ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಲಿಹಾತ್ ವಿದ್ಯಾ ಸಂಸ್ಥೆಯ ಆಸ್ಲಮ್ ಹೈಕಾಡಿ, ಜೊತೆ ಕಾರ್ಯದರ್ಶಿ ಫೈಝಲ್ ಇಸ್ಲಾಂ ವಿದ್ಯಾ ಸಂಸ್ಥೆ ಶಿರ್ವ ಇದರ ಖಾಲಿದ್ ಮುಹಮ್ಮದ್ ಮತ್ತು ಖಜಾಂಚಿಯಾಗಿ ದಾರುಸ್ಸಲಾಮ್ ಹೂಡೆ ವಿದ್ಯಾ ಸಂಸ್ಥೆಯ ಜಿ. ಅಶ್ರಫ್ ಮತ್ತು ಎಂಟು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷ ರಾದ ಮುಹಮ್ಮದ್ ಮೌಲಾ ಮತ್ತು ಪ್ರಧಾನ ಕಾರ್ಯದರ್ಶಿಯವರು ಈ ಘಟಕದ ಖಾಯಂ ಆಹ್ವಾನಿತರಾಗಿರುತ್ತಾರೆ.

ಸಭೆ ಮೌಲಾನ ಹಾಫೀಜ್ ಮುಹಮ್ಮದ್ ಯೂನುಸ್ ರವರ ಕಿರಾಅತ್‌ನೊಂದಿಗೆ ಆರಂಭಗೊಂಡು, ಕೇಂದ್ರ ಸಮಿತಿಯ ಉಪಾಧ್ಯಕ್ಷ ಶಬೀ ಖಾಝಿ ಯವರು ಸ್ವಾಗತಿಸಿ, ಮೀಫ್ ಉಡುಪಿ ಘಟಕ ಸಂಚಾಲಕ ಅಡ್ವೋಕೇಟ್ ಉಮರ್ ಫಾರೂಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಘಟಕದ ಉಪಾಧ್ಯಕ್ಷ ಪರ್ವೇಝ್ ಅಲಿ ಮತ್ತು ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ.ಎ. ಇಕ್ಬಾಲ್, ಕಾರ್ಯದರ್ಶಿ ಅನ್ವರ್ ಹುಸೈನ್, ಸದಸ್ಯರು ಅಝೀಝ್ ಅಂಬರ್ವಾಲ್ಲಿ ಮತ್ತು ಶರೀಫ್ ಬಜ್ಪೆ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ಮುಹಮ್ಮದ್ ಶಾರಿಕ್ ನೆರವೇರಿಸಿದರು.

ಇದರೊಂದಿಗೆ ಮೀಫ್ ಕಾರ್ಯವ್ಯಾಪ್ತಿಯು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳವರೆಗೆ ಹೀಗೆ ಒಟ್ಟು ಆರು ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News