ದ.ಕ: ಸೆ.11ರಿಂದ 2ನೇ ಹಂತದ ಮಿಷನ್ ಇಂದ್ರಧನುಷ್ ಅಭಿಯಾನ
ಮಂಗಳೂರು, ಸೆ.8: ದ.ಕ. ಜಿಲ್ಲೆಯಲ್ಲಿ ಒಂದನೇ ಹಂತದ ಮಿಷನ್ ಇಂದ್ರಧನುಷ್ 5.0 ಅಭಿಯಾನ ಪೂರ್ಣಗೊಂಡಿದ್ದು, ಸೆ.11ರಿಂದ 16ರವರೆಗೆ 2ನೇ ಹಾಗೂ ಅ.9ರಿಂದ 14ರವರೆಗೆ 3ನೆ ಹಂತದ ಅಭಿಯಾನ ನಡೆಯಲಿದೆ ಎಂದು ದ.ಕ.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಹೇಳಿದರು.
ದ.ಕ.ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಣಾಮ ಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿದೆ. ಅಗತ್ಯವಿರುವ ರೋಗ ನಿರೋಧಕ ಚುಚ್ಚುಮದ್ದಿನಿಂದ ಭಾಗಶಃ ಅಥವಾ ಪೂರ್ಣಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು ಮತ್ತು 2 ವರ್ಷ ಪ್ರಾಯದೊಳಗಿನ ಮಕ್ಕಳನ್ನು ಗುರುತಿಸಿ ಈ ಹಂತದಲ್ಲಿ ಫಲಾನುಭವಿಗಳಿಗೆ ಪೂರ್ಣ ಮತ್ತು ಸಂಪೂರ್ಣ ಲಸಿಕೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದರು.
ಈ ಕಾರ್ಯಕ್ರಮದಡಿ ಮಕ್ಕಳಿಗೆ ಕಂಡುಬರುವ ಬಾಲಕ್ಷಯ, ಪೋಲಿಯೊ, ಗಂಟಲುಮಾರಿ (ಢಿಪ್ತೀರಿಯಾ), ನಾಯಿಕೆಮ್ಮು, ಧನುರ್ವಾಯು, ಹಿಬ್, ಕಾಮಲೆ (ಹೆಪಟ್ಟೆಟಸ್-ಬಿ), ರೋಟ ವೈರಸ್, ನ್ಯೂಮೋಕಾಕಲ್, ದಡಾರ ಮತ್ತು ರುಬೆಲ್ಲಾದಂತಹ 11 ಮಾರಕ ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಡಾ.ರಾಜೇಶ್ ತಿಳಿಸಿದರು.
ರವಿವಾರ ಮತ್ತು ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ವಾರದ ಆರು ದಿನ ಲಸಿಕೆ ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಉಪ ಆರೋಗ್ಯ ಕೇಂದ್ರ, ಕ್ಯಾಂಪ್ ಮೂಲಕವೂ ಲಸಿಕೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಮನಪಾ ವ್ಯಾಪ್ತಿಯಲ್ಲಿ 857 ಮಕ್ಕಳು ಹಾಗೂ 333 ಗರ್ಭಿಣಿಯರನ್ನು ಗುರುತಿಸಿ ಶೇ.100 ಪ್ರಗತಿ ದಾಖಲಿಸಲಾಗಿದೆ. ಜಿಲ್ಲೆಯ 5103 ಮಕ್ಕಳಲ್ಲಿ 3891 ಮಂದಿಗೆ ಲಸಿಕೆಯ ಗುರಿ ಸಾಧಿಸಲಾಗಿದೆ. 1,218 ಗರ್ಭಿಣಿಯರಲ್ಲಿ 814 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಡಾ. ರಾಜೇಶ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭಾರ ಡಿಎಚ್‌ಒ ಡಾ. ಸುದರ್ಶನ್, ವೆನ್ಲಾಕ್ ಆಸ್ಪತ್ರೆಯ ಡಾ. ಸದಾಶಿವ ಶಾನುಭಾಗ್, ಲೇಡಿಗೋಶನ್ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಉಪಸ್ಥಿತರಿದ್ದರು.