ಮೂಡುಬಿದಿರೆ: ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಚಾಲನೆ
ಮೂಡುಬಿದಿರೆ, ಅ.6: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ ಎರಡು ದಿನಗಳ ಕಾಲ 13ನೇ ವರ್ಷದ 'ಆಳ್ವಾಸ್ ಪ್ರಗತಿ ಉದ್ಯೋಗ ಮೇಳ'ಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಇಂದು ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಂಸದರು, ದೇಶದಲ್ಲಿ ನರೇಂದ್ರ ಮೋದಿಯವರು ನಿರುದ್ಯೋಗ ಸಮಸ್ಯೆಯ ಬಗ್ಗೆ ತಿಳಿದು ಕೊಂಡು ಅದನ್ನು ಹೋಗಲಾಡಿಸಲು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ದೀನ್ ದಯಾಳ್ ಕೌಶಲ್ಯ ಅಭಿವೃದ್ಧಿ ಮಂತ್ರಾಲಯವನ್ನು ಆರಂಭಿಸಿದರು. ದೇಶದಲ್ಲಿ 6 ಸಾವಿರ ಸ್ಟಾಟ್ ಆಪ್ ಕಂಪೆನಿಗಳು ಪ್ರಾರಂಭವಾಗಿವೆ. ದೇಶದಲ್ಲಿ 2014ರಿಂದ 2023ರವರೆಗೆ 9 ಲಕ್ಷ ಯುವ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದ್ದಾರೆ.
ಉದ್ಯೋಗ ಮೇಳ ನಡೆಸುವುದು ಒಂದು ಮಹತ್ವದ ಮತ್ತು ಕಠಿಣ ಸವಾಲಿನ ಕೆಲಸ ಎನ್ನುವುದು ನನಗೆ ಮನವರಿಕೆ ಆಗಿದೆ. ಕಳೆದ 12 ವರ್ಷ ಗಳಿಂದ ಯುವಜನರಿಗೆ ಉದ್ಯೋಗ ನೀಡುವ ಸವಾಲಿನ ಉದ್ಯೋಗ ಮೇಳ ನಡೆಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ನಳಿನ್ ಕುಮಾರ್ ಪ್ರಶಂಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಕಳೆದ 12 ವರ್ಷಗಳಿಂದ ಈ ರೀತಿಯ ಉದ್ಯೋಗ ಮೇಳವನ್ನು ಪ್ರಾಮಾಣಿಕವಾಗಿ ಆಯೋಜಿಸುತ್ತಾ ಬಂದಿದ್ದೇವೆ. 2,220 ಕಂಪೆನಿಗಳು ಭಾಗವಹಿಸಿ 65,661 ಯುವಜನರಿಗೆ ಉದ್ಯೋಗ ದೊರಕಿಸಿಕೊಡಲು ಸಾಧ್ಯವಾಗಿದೆ. ಈ ಬಾರಿ 13ನೆ ವರ್ಷದ ಈ ಉದ್ಯೋಗ ಮೇಳದಲ್ಲಿ 206 ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 17,750 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕೌಶಲ್ಯವನ್ನು ಮೈಗೂಡಿಸಿಕೊಂಡು ದೇಶದ ಮಾನವ ಸಂಪನ್ಮೂಲ ವ್ಯಕ್ತಿ ಗಳಾಗಿ ದೇಶದ ಅಭಿವೃದ್ಧಿ ಗೆ ಕೊಡುಗೆ ನೀಡುವಂತವರಾಗಬೇಕು. ವಿದೇಶದಲ್ಲೇ ಉದ್ಯೋಗ ಮಾಡುವ ವ್ಯಾಮೋಹ ಬೇಡ. ವಿದೇಶಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ. ಆದರೆ ಭಾರತ ವಿಪುಲವಾದ ಮಾನವ ಸಂಪನ್ಮೂಲ ಹೊಂದಿದೆ. ಈ ಸಂಪನ್ಮೂಲ ದೇಶದ ಬೆಳವಣಿಗೆಗೆ ಬಳಕೆಯಾಗಬೇಕಾಗಿದೆ ಎಂದು ಡಾ. ಆಳ್ವ ಯುವಜನರಿಗೆ ಕರೆನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಉತ್ತಮ ತಯಾರಿಯಿಂದ ಸಂದರ್ಶನದಲ್ಲಿ ಯಶಸ್ಸು ಪಡೆದು ಉದ್ಯೋಗ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಸಮಾರಂಭದ ವೇದಿಕೆಯಲ್ಲಿ ಶಾಸಕರಾದ ಹರೀಶ್ ಪೂಂಜಾ, ಬೋಜೇಗೌಡ, ಮಾಜಿ ಸಚಿವ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಯುಎಇ ಬುರ್ಜಿಲ್ ಹೋಲ್ಡಿಂಗ್ಸ್ ನ ಮುಖ್ಯಸ್ಥ ಡಾ.ಸಂಜಯ ಕುಮಾರ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್ ಮಾನವ ಸಂಪನ್ಮೂಲ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಪ್ಯಾಕ್ಟ್ ಸೆಟ್ ಸಿಸ್ಟಮ್ ಇಂಡಿಯಾ ಪ್ರೈ ಲಿಮಿಟೆಡ್ ನ ಉಪಾಧ್ಯಕ್ಷೆ ಅನುಪಮ್ ರಂಜನ್, ಉದ್ಯೋಗ ಮೇಳದ ಸಂಯೋಜಕ ವಿವೇಕ್ ಆಳ್ವ ಉಪಸ್ಥಿತರಿದ್ದರು.