×
Ad

ಮದರ್ ತೆರೇಸಾರ ಮಾನವೀಯತೆಯ ಪ್ರಚಾರ ಇಂದಿನ ಅನಿವಾರ್ಯ: ಪ್ರೊ. ಕೆ. ಫಣಿರಾಜ್

Update: 2023-09-21 17:40 IST

ಮಂಗಳೂರು: ಶತಶತಮಾನಗಳಿಂದಲೂ ಧರ್ಮ, ಜನಾಂಗೀಯ ದ್ವೇಷ ಸಂರ್ಘಗಳ ಸಂದರ್ಭ ಶಾಂತಿ ಸ್ಥಾಪನೆಗಾಗಿ ಪ್ರಚಾರವಾದ ಆಧ್ಯಾತ್ಮವೇ ಪ್ರೀತಿ. ಬಂಡವಾಳಶಾಹಿ ಯುಗದಲ್ಲಿ ಆ ಪ್ರೀತಿಯ ಆಧ್ಯಾತ್ಮವನ್ನು ಹಂಚಿದ ಮದರ್ ತೆರೇಸಾ ಅವರ ತ್ಯಾಗಮಯ ಜೀವನದ ಬಗ್ಗೆ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಇಂದಿನ ಅನಿವಾರ್ಯ ಎಂದು ಖ್ಯಾತ ಸಾಹಿತಿ, ವಿಮರ್ಶಕರಾದ ಪ್ರೊ. ಕೆ. ಫಣಿರಾಜ್ ಹೇಳಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ ೨೬ನೆ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಪನಿಷದ್ನ ಶ್ಲೋಕವೊಂದನ್ನು ಉಲ್ಲೇಖಿಸಿ ಮಾತು ಆರಂಭಿಸಿದ ಪ್ರೊ. ಫಣಿರಾಜ್, ಸುಮಾರು ೩೦೦೦ ವರ್ಷಗಳಿಂದ ಸಮಾಜದಲ್ಲಿ ಕಂಡು ಬಂದ ದ್ವೇಷ ಸಂಘರ್ಷಗಳ ಸಂದರ್ಭ ಬುದ್ಧ, ಯೇಸು, ಮುಹಮ್ಮದ್ ಪೈಗಂಬರರು ಪ್ರೀತಿಯ ಸೆಲೆಗಳಾಗಿ ಮಾನವೀಯತೆಯನ್ನು ಪ್ರಚಾರ ಪಡಿಸಿದ್ದರು. ಮಹಾಭಾರತ, ಉಪನಿಷದ್, ನಂತರದ ಭಕ್ತಿ ಪಂಥದ ಸಾರವೂ ಪ್ರಜಾಪ್ರಭುತ್ವದ ಚಳವಳಿಯಲ್ಲಿ ಅಡಕವಾಗಿದೆ. ಪ್ರತಿಯೊಂದು ಸಂಘರ್ಷದ ಕಾಲದಲ್ಲಿ ಹುಟ್ಟಿದ ಆಧ್ಮಾತ್ಮಿಕ ಚಿಂತನೆಗಳೂ ವೈವಿಧ್ಯತೆಯಿಂದ ಕೂಡಿದ್ದಾಗಿದ್ದು, ದೇಶದಲ್ಲಿ ಇಂದಿನ ದಿನಗಳಲ್ಲಿ ವಿಜೃಂಭಿಸುವ ದ್ವೇಷ ಸಂಘರ್ಷಕ್ಕೆ ಪ್ರತಿಯಾಗಿ ಮಾನವೀಯತೆಯ ಆಧ್ಮಾತ್ಮವನ್ನು ಹಂಚಬೇಕಾಗಿದೆ. ಇದಕ್ಕಾಗಿ ಪರಸ್ಪರ ಸ್ನೇಹವೆಂಬ ಮೈತ್ರಿ ಅಗತ್ಯವಾಗಿದೆ. ಮೈತ್ರಿಯನ್ನು ಭಾರತದ ಆಧ್ಯಾತ್ಮದಲ್ಲಿ ಕಟ್ಟಿಕೊಳ್ಳದಿದ್ದರೆ ನಮಗೆ ದೊರೆತ ಸ್ವಾತಂತ್ರ್ಯಕ್ಕೆ ಅರ್ಥವೇ ಇರದು ಎಂದವರು ಹೇಳಿದರು.

ಮದರ್ ತೆರೇಸಾ ಅವರು ಆ ದಿಸೆಯಲ್ಲಿ ನಮಗೆ ಆದರ್ಶಪ್ರಾಯರು. ವಿದೇಶದಲ್ಲಿ ಹುಟ್ಟಿ ಆದರ್ಶದ ಜೀವನದೊಂದಿಗೆ ಭಾರತಕ್ಕೆ ಬಂದಿದ್ದ ಮದರ್ ತೆರೇಸಾ ಇಲ್ಲಿನ ಕೊಳೆಗೇರಿ ಬದುಕನ್ನು ಜೀವಿಸುವ ಜತೆಗೆ ಸೇವೆಯ ಮೂಲಕ ಆಧ್ಯಾತ್ಮವನ್ನು ಕಂಡುಕೊಂಡವರು. ಅದನ್ನು ನಾವು ನಮ್ಮದಾಗಿಸಿಕೊಳ್ಳಬೇಕು ಎಂದು ಪ್ರೊ. ಫಣಿರಾಜ್ ಹೇಳಿದರು.

‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಷಯ ಮಂಡನೆ ಮಾಡಿ ಮಾತನಾಡಿದ ಜನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು, ಹಲವು ವೈವಿಧ್ಯತೆಗಳನ್ನು ಪರಸ್ಪರ ಒಪ್ಪಿಕೊಂಡು ಬುದುಕುವುದೇ ಬಹುತ್ವ. ಅದುವೇ ಸಂವಿಧಾನದ ಮೂಲ ತತ್ವ ಎಂದರು.

ಕರಾವಳಿಯ ಕೋಮು ಸಾಮರಸ್ಯ ಕಾಪಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ ಅವರು, ಸಮಾಜದಲ್ಲಿನ ಭಿನ್ನತೆಗಳನ್ನು ಸ್ವೀಕರಿಸಿಕೊಂಡು ಧನಾತ್ಮಕ ಯೋಚನೆಯ ಮೂಲಕ ಪ್ರೀತಿಯ ಸೆಲೆಯನ್ನು ಹುಟ್ಟಿಸುವ ಕೆಲಸ ಆಗಬೇಕು. ಮಾನವೀಯತೆಯೇ ಆ ಪ್ರೀತಿಯ ಸೆಲೆ ಆಗಿದ್ದು, ಮದರ್ ತೆರೇಸಾ ಅವರ ಜೀವನ ಅರ್ಥ ಮಾಡಿಕೊಂಡರೆ ಪ್ರೀತಿಯ ಸೆಲೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಮದರ್ ತೆರೇಸಾ ಅವರ ಮೇಲೆಯೂ ಹಲವು ಟೀಕೆ, ಆಪಾದನೆಗಳಿವೆ. ಮಾನವೀಯ ಕಾರ್ಯ ಮಾಡಲು ತೊಡಗಿಕೊಂಡವರೆಲ್ಲರೂ ಇಂತಹ ಟೀಕೆ, ಟಿಪ್ಪಣಿಗಳಿಗೆ ಒಳಗಾದವರು. ಆದರೆ ತನ್ನ ಧರ್ಮದ ತತ್ವವನ್ನು ಸೇವೆಯ ಮೂಲಕ ಅನುಷ್ಠಾನಗೊಳಿಸುವ ಕಾರ್ಯವನ್ನು ಮದರ್ ತೆರೇಸಾ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಆಚರಣೆ, ಸಂಪ್ರದಾಯವನ್ನು ಬದಿಗೊತ್ತಿ ಅವರು ಮಾನವೀಯತೆಯನ್ನು ಹಂಚಿದ್ದಾರೆ ಎಂದರು.

ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುವ ಕೆಲಸ ಆಗುತ್ತಿದೆ. ದ್ವೇಷ ಭಾಷಣವನ್ನು ಅನುಸರಿಸಿ ಅದರ ಪರಿಣಾಮ ಏನಾಗುತ್ತಿದ್ದೆ ಎಂಬುದನ್ನೂ ನಾವು ಕಾಣುತ್ತಿದ್ದೇವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಮಾಹಿತಿಗಳನ್ನು ಅಂಧವಾಗಿ ಅನುಸರಿಸದೆ, ಮಾಹಿತಿಯನ್ನು ಪರೀಕ್ಷಿಸಿ ನೈಜತೆಯನ್ನು ಅರ್ಥಮಾಡಿಕೊಂಡಾಗ ಯಾರಿಗೂ ಯಾರನ್ನೂ ಯಾಮಾರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ನನ್ನ ಧರ್ಮದ ಜತೆಯಲ್ಲಿ ಇನ್ನೊಬ್ಬನ ಧರ್ಮವೂ ನಮಗೆ ಮುಖ್ಯವಾದಾಗ ಪ್ರೀತಿಯ ಸೆಲೆ ಹುಟ್ಟಿ ಬರಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಮದರ್ ತೆರೇಸಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಮಾಜಿ ಮೇಯರ್ ಕೆ. ಅಶ್ರಫ್, ದಲಿತ ಮುಖಂಡರಾದ ದೇವದಾಸ್, ಮದರ್ ತೆರೇಸಾ ಸಂಸ್ಥೆಯ ಸಿ. ಶಾಂತಿಧನ್, ಸಿ. ರೋನಾ, ಧರ್ಮಗುರುಗಳಾ ಫಾ. ರೂಪೇಶ್ ಮಾಡ್ತ, ಫಾ. ಜಾನ್ ಡಿಸಿಲ್ವಾ, ಫಾ. ಜೆ.ಬಿ. ಸಲ್ಡಾನಾ, ಪ್ರಮುಖರಾದ ಮರ್ಲಿನ್ ರೋಗೋ, ಅನಿಲ್ ಲೋಬೋ, ಜೋಸೆಫ್ ಕ್ರಾಸ್ತಾ, ವೇದಿಕೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಸಚಿವ ರಮಾನಾಥ ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪದ್ಮರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಏಕತಾರಿ ಹಾಡುಗಾರ ನಾದ ಮಣಿನಾಲ್ಕೂರು ಹಾಗೂ ಜನಪ್ರೀತಿ ಬಳಗದಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ, ನಮ್ಮ ಕಾಲದ ಅತಿ ಶ್ರೇಷ್ಠ ಮಾನವತಾವಾದಿ ಮದರ್ ತೆರೇಸಾ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲಿ ಪರಮಾತ್ಮನನ್ನು ಕಂಡು ನಮಗೂ ಕಾಣಿಸಲು ಪ್ರಯತ್ನಿಸಿದವರು ಎಂದರು.

ಜಂಟಿ ಕಾರ್ಯದರ್ಶಿ ಮಂಜುಳಾ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

 






 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News