×
Ad

ಎಂಆರ್‌ಪಿಎಲ್ ರಸ್ತೆಗೆ ‘ಕ್ಯಾ. ಎಂ.ವಿ.ಪ್ರಾಂಜಲ್’ ನಾಮಕರಣಕ್ಕೆ ಒತ್ತಾಯ

Update: 2024-01-09 14:56 IST

ಮಂಗಳೂರು, ಜ.9: ಹುತಾತ್ಮ ಯೋಧ ಕ್ಯಾ. ಎಂ.ವಿ.ಪ್ರಾಂಜಲ್ ಅವರು ಹುಟ್ಟಿ ಶಾಲಾ ದಿನಗಳಲ್ಲಿ ಓಡಾಡಿಕೊಂಡಿದ್ದ ಸುರತ್ಕಲ್ ಎಂಆರ್‌ಪಿಎಲ್ ರಸ್ತೆಗೆ ‘ಕ್ಯಾ. ಎಂ.ವಿ.ಪ್ರಾಂಜಲ್ ರಸ್ತೆ’ ಎಂದು ನಾಮಕರಣ ಮಾಡಬೇಕು, ಸುರತ್ಕಲ್ ಸರ್ಕಲ್‌ನಲ್ಲಿ ಅವರ ಹೆಸರಿನಲ್ಲಿ ಪ್ರತಿಮೆ ಸ್ಥಾಪಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿವೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು, ಈ ಎರಡು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕಳೆದ ವರ್ಷದ ನ.27ರಂದು ಮಂಗಳೂರು ಮೇಯರ್, ಶಾಸಕರು, ಉಸ್ತುವಾರಿ ಸಚಿವರಿಗೆ ನೀಡಲಾಗಿತ್ತು. ಆದರೆ ಇದುವರೆಗೆ ಮೇಯರ್ ಅಥವಾ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಖೇದಕರ. ಸುರತ್ಕಲ್‌ನಿಂದ ಕಟ್ಲ-ಕಾನವರೆಗಿನ ಕೇವಲ 750 ಮೀ. ಹೊರಗಿಟ್ಟು ಉಳಿದ ಕಟ್ಲ ಕ್ರಾಸ್‌ನಿಂದ ಗಣೇಶಪುರ-ಕಾಟಿಪಳ್ಳ-ಕೃಷ್ಣಾಪುರ, ಚೊಕ್ಕಬೆಟ್ಟು-ಕಟ್ಲ ಕ್ರಾಸ್‌ವರೆಗಿನ ವರ್ತುಲ ರಸ್ತೆಗೆ ಮಾತ್ರ ನಾಮಕರಣದ ಪ್ರಸ್ತಾಪ ಮಾಡಿದ್ದಾರೆ. ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಮೆ ಸ್ಥಾಪನೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಕೂಡಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭೂಸೇನಾ ಮಾಜಿ ಅಧಿಕಾರಿ ಬ್ರಿಗೇಡಿಯರ್ ಐ.ಎನ್.ರೈ, ವಾಯುಸೇನೆ ಮಾಜಿ ಅಧಿಕಾರಿ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಶೆಟ್ಟಿ, ವಿಹಿಂಪ ಸುರತ್ಕಲ್ ಪ್ರಖಂಡ ಅಧ್ಯಕ್ಷ ಭಾಸ್ಕರ ರಾವ್, ಸುರತ್ಕಲ್ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಐ.ಯಮುನ ಶೇಖರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News