×
Ad

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಸಮಾರೋಪ ಪ್ರಶಸ್ತಿ ಪ್ರದಾನ

Update: 2023-11-27 20:24 IST

ಮಂಗಳೂರು: ಕನ್ನಡ ಕರಾವಳಿಯ ಸಮಗ್ರ ಕಲೆಯಾದ ಯಕ್ಷಗಾನದಲ್ಲಿ ಮುಂದಿನ ಪೀಳಿಗೆಗೆ ಆಸಕ್ತಿ ಹುಟ್ಟಿಸು ವುದು ನಮ್ಮ ಜವಾಬ್ದಾರಿಯಾಗಿದೆ. ಪರಂಪರಾಗತವಾದ ಜೀವನ ಮೌಲ್ಯಗಳು ಹಾಗೂ ನಮ್ಮ ಸಂಸ್ಕೃತಿಯ ಬೇರು ಗಳನ್ನು ಅದು ಸಹಜವಾಗಿ ಬಿಂಬಿಸುತ್ತದೆ. ಯಕ್ಷಗಾನ ಈಗಿನ ಮಟ್ಟಕ್ಕೆ ಬೆಳೆದಿರುವುದು ನೈಜ ಕಲಾಭಿಮಾನಿಗಳಿಂದ ಎಂದು ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ) ಪುತ್ತೂರು ಇವುಗಳ ಸಹಯೋಗದಲ್ಲಿ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹದ ನುಡಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದ್ಯಮಿ ವಿ.ಕರುಣಾಕರ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಹಿರಿಯ ಅರ್ಥದಾರಿ ಕೆ.ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ 2022-23ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು 10,000 ರೂ. ನಗದಿನೊಂದಿಗೆ ನೀಡಲಾಯಿತು. ಅತಿಥಿಗಳಾಗಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅಶೋಕ್ ಕುಮಾರ್ ಚೌಟ, ಉದ್ಯಮಿ ಜಗದೀಶ, ಶೀನ ಪೂಜಾರಿ ಇರಾ ಆಚೆಬೈಲು ಭಾಗವಹಿಸಿದ್ದರು.

ಈ ಸಂದರ್ಭ ತುಳು ನಾಟಕ ಬ್ರಹ್ಮ ಬಿ.ರಾಮ ಕಿರೋಡಿಯನ್‌ರ ಶತಮಾನದ ಸಂಸ್ಮರಣೆಯನ್ನು ನೆರವೇರಿಸಲಾಯಿತು. ರಂಗ ನಿರ್ದೇಶಕ ತಮ್ಮ ಲಕ್ಷ್ಮ್ಮಣ ಅವರಿಗೆ ‘ರಾಮ ಕಿರೋಡಿಯನ್-100’ ಶತಮಾನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾ ಯಿತು. ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ ಸಂಸ್ಮರಣ ಭಾಷಣ ಮಾಡಿದರು. ರಾಮ ಕಿರೋಡಿಯನ್‌ರ ಮಕ್ಕಳಾದ ನರೇಂದ್ರ ಕಿರೋಡಿಯನ್ ಮತ್ತು ಜಯಶ್ರೀ ವೇದಿಕೆಯಲ್ಲಿದ್ದರು. ಮೊಮ್ಮಗಳು ಸ್ವಪ್ನ ಕೋಟ್ಯಾನ್ ನುಡಿ ನಮನ ಸಲ್ಲಿಸಿದರು.

ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಕಾರ್ಯದರ್ಶಿಗಳಾದ ಲಕ್ಷ್ಮಿ ನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.

ಸಮಿತಿಯ ಪ್ರಮುಖರಾದ ಕರುಣಾಕರ ಶೆಟ್ಟಿ ಪಣಿಯೂರು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಆಜ್ರಿ, ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News