ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳ ಪದಗ್ರಹಣ
ಮಂಗಳೂರು: ವೈದ್ಯಕೀಯ ವೃತ್ತಿಯು ಪವಿತ್ರವಾಗಿದೆ. ವೈದ್ಯರು ವೃತ್ತಿ ಪರತೆಯನ್ನು ಕರ್ತವ್ಯ ಸೇವಾ ಮನೋಭಾವ, ಮಾನವೀಯ ಸಂಬಂಧ ಮತ್ತು ಶ್ರದ್ಧೆಯನ್ನು ಮೈಗೂಡಿಸಿಕೊಂಡು ವೃತ್ತಿ, ಘನತೆ, ಗೌರವವನ್ನು ಎತ್ತಿ ಹಿಡಿಯಲು ಶ್ರಮಿಸಬೇಕು ಎಂದು ನಗರದ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯರು ರೋಗಿಗಳ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸಬೇಕಾಗಿದೆ. ಕೋವಿಡ್, ಮಾರಕ ಖಾಯಿಲೆಯ ಗಂಭೀರ ಮತ್ತು ಭಯಾನಕ ಸಂದಿಗ್ದ ಪರಿಸ್ಥಿತಿಯಲ್ಲಿ ವೈದ್ಯರ ನಿಸ್ವಾರ್ಥ ಸೇವೆ, ತ್ಯಾಗದ ಮನೋಭಾವ ಅವಿಸ್ಮರಣೀಯ ಎಂದು ಅನುಪಮ್ ಅಗರ್‌ವಾಲ್ ಶ್ಲಾಘಿಸಿದರು. ಬಳಿಕ ಸಂಸ್ಥೆಯ ಮಾಸಿಕ ‘ಮೆಡಿಲೋರ್’ನ್ನು ಬಿಡುಗಡೆಗೊಳಿಸಿದರು.
ಕಣಚೂರು ವೈದ್ಯಕೀಯ ಕಾಲೇಜಿನ ಸಲಹಾ ಸಮಿತಿಯ ಅಧ್ಯಕ್ಷ ಪ್ರೊ.ಡಾ.ಮುಹಮ್ಮದ್ ಇಸ್ಮಾಯೀಲ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು. ನೂತನ ಅಧ್ಯಕ್ಷ ಪ್ರೊ.ಡಾ.ರಂಜನ್, ನಿರ್ಗಮನ ಅಧ್ಯಕ್ಷ ಡಾ.ವೇಣು ಗೋಪಾಲ್ ಮಾತನಾಡಿದರು. ವೇದಿಕೆಯಲ್ಲಿ ನೂತನ ಕೋಶಾಧಿಕಾರಿ ಡಾ. ಪ್ರಶಾಂತ್ ಉಪಸ್ಥಿತರಿದ್ದರು. ನಿರ್ಗಮನ ಕಾರ್ಯದರ್ಶಿ ಡಾ. ಅರ್ಚಿತ್ ಬೋಳಾರ್ ವರದಿ ವಾಚಿಸಿದರು. ನಿರ್ಗಮನ ಕೋಶಾಧಿಕಾರಿ ಡಾ. ನಂದಕಿ ಶೋರ್ ಲೆಕ್ಕಪತ್ರ ಮಂಡಿಸಿದರು. ಡಾ.ಆದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಡಾ. ಅವಿನ್ ಆಳ್ವ ವಂದಿಸಿದರು.