ಫಾದರ್ ಮುಲ್ಲರ್‌ನಲ್ಲಿ ಮಹಿಳಾ ಮಾನಸಿಕ ಆರೋಗ್ಯ- ಪೆರಿನಾಟಲ್ ಸೈಕಿಯಾಟ್ರಿ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅರಬಿಂದ ಬ್ರಹ್ಮಾವರ ಅಭಿಪ್ರಾಯಪಟ್ಟಿದ್ದಾರೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಮಹಿಳಾ ಮತ್ತು ಮಾನಸಿಕ ಆರೋಗ್ಯ ವಿಶೇಷ ವಿಭಾಗ ಮತ್ತು ಪೆರಿನಾಟಲ್ ಸೈಕಿಯಾಟ್ರಿ ಸ್ಪೆಷಾಲಿಟಿ ಆಶ್ರಯದಲ್ಲಿ ನಡೆದ ಮಹಿಳಾ ಮಾನಸಿಕ ಆರೋಗ್ಯ ಮತ್ತು ಪೆರಿನಾಟಲ್ ಸೈಕಿಯಾಟ್ರಿ ಬಗ್ಗೆ ಫಾದರ್ ಮುಲ್ಲರ್ ಸಂಸ್ಥೆಯ ದಶಮಾನೋತ್ಸವ ಸಭಾಂಗಣದಲ್ಲಿ ನಡೆದ 7ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರೋಗ್ಯ ಮತ್ತು ಪ್ರಸವಪೂರ್ವ ಆರೈಕೆಯು ಎರಡು ಪ್ರಮುಖ ಕ್ಷೇತ್ರಗಳಾಗಿವೆ. ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇನ್ನಷ್ಟು ವಿಚಾರ ಸಂಕಿರಣಗಳ ಅಗತ್ಯವಿದೆ ಎಂದು ಅವರು ಹೇಳಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಮುಖ್ಯ ಅತಿಥಿಯಾಗಿ ಮಾತನಾಡಿ ‘ಮಾನಸಿಕ ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿ ಕರ್ನಾಟಕದಲ್ಲೇ ಸುಸಜ್ಜಿತ ಸೌಲಭ್ಯ ಹೊಂದಿದ ಮೊದಲ ಆಸ್ಪತ್ರೆಯಾಗಿದೆ ಫಾದರ್ ಮುಲ್ಲರ್. ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ವಿಚಾರದಲ್ಲಿ ನಾವು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆದರೆ ಕೆಲವರು ಮಾನಸಿಕ ಕಾಯಿಲೆ ಇದ್ದರೂ ಮನೋವೈದ್ಯರ ಬಳಿ ಸಹಾಯ ಪಡೆಯಲು ಹಿಂದೇಟು ಹಾಕುತ್ತಾರೆ. ನಮ್ಮಲ್ಲಿ ಇಂದು ವಿಚ್ಛೇದನದ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿದೆ ಮತ್ತು ವಿಚ್ಛೇದನದ ನಂತರ ಮಹಿಳೆಯರು ಪುರುಷರಿಗಿಂತ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದರು.
ಮಾನಸಿಕ ಆರೋಗ್ಯ ಸಮಸ್ಯೆಯನ್ನು ಪುರುಷರಷ್ಟೇ ಮಹಿಳೆಯರು ಅನುಭವಿಸುತ್ತಾರೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.
ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಸಂಪಾದಕ ಡಾ ಓಂಪ್ರಕಾಶ ಈ ಸಂದರ್ಭದಲ್ಲಿ ಮಾತನಾಡಿದರು.
ಮಹಿಳಾ ಮತ್ತು ಮಾನಸಿಕ ಆರೋಗ್ಯ ವಿಶೇಷ ವಿಭಾಗದ ಅಧ್ಯಕ್ಷ ಡಾ.ಬಿ.ಕೆ ವಾರಾಯಿಚ್ ಸ್ವಾಗತಿಸಿ, ಸಂಘಟನಾ ಅಧ್ಯಕ್ಷೆ ಡಾ.ಸುಪ್ರಿಯಾ ಹೆಗ್ಡೆ ಆರೂರ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಅರುಣಾ ಯಡಿಯಾಲ್ ಕಾರ್ಯಕ್ರಮ ನಿರೂಪಿಸಿದರು.