×
Ad

ವಿವಿ, ಕಾಲೇಜುಗಳಲ್ಲಿ ಪ್ರಧಾನಿ ಮೋದಿ ಸೆಲ್ಫಿ ಪಾಯಿಂಟ್: ರಾಜ್ಯ ಎನ್‌ಎಸ್‌ಯುಐ ಖಂಡನೆ

Update: 2023-12-04 18:25 IST

ಮಂಗಳೂರು: ದೇಶದ ಎಲ್ಲ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೆಲ್ಫಿ ಪಾಯಿಂಟ್‌ ಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು(ಯುಜಿಸಿ)ಸೂಚನೆ ನೀಡಿರುವುದಕ್ಕೆ ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಯುಜಿಸಿಯು ಈ ತಾಣಗಳಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮತ್ತು ಅವುಗಳನ್ನು ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಕ್ಯಾಂಪಸ್ ಅಧಿಕಾರಿಗಳನ್ನು ಹುರಿದುಂಬಿಸುವುದು ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಸರಿಯಲ್ಲ. ಇದು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ತೊಂದರೆಯಾಗಲಿದ್ದು, ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸವಾದ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆ ಗುರಿಯಾಗಿಸಿ ಕ್ಯಾಂಪಸ್‌ಗಳಲ್ಲಿ ಇಂತಹ ಅಭಿಯಾನ ನಡೆಸಿ ಯುವ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿರುವುದು ವಿಷಾದನೀಯ. ಪಕ್ಷದ ಪರವಾಗಿ ಪ್ರಚಾರ ಮಾಡಲು ತನ್ನದೇ ಆದ ವೇದಿಕೆಯಿದೆ, ಅದು ಬಿಟ್ಟು ಇಂತಹ ಚಟುವಟಿಕೆಗಳನ್ನು ಕಾಲೇಜು ಕ್ಯಾಂಪಸ ಗಳಲ್ಲಿ ಆರಂಭಿಸುವುದು ಸರಿಯಲ್ಲ. ಯುಜಿಸಿಯು ಒಂದು ಸ್ವಾಯತ್ತ ಸಂಸ್ಥೆಯಾಗಿ ಇಂತಹ ಹುಚ್ಚಾಟಗಳಿಗೆ ಶೈಕ್ಷಣಿಕ ವ್ಯವಸ್ಥೆಯನ್ನು ಬಲಿಕೊಡ ಬಾರದು. ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಸೂಚನೆಯನ್ನು ಹಿಂಪಡೆಯದಿದ್ದಲ್ಲಿ ವಿದ್ಯಾರ್ಥಿ ಚಳವಳಿ ನಡೆಸುವುದಾಗಿ ಸವಾದ್ ಸುಳ್ಯ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News