×
Ad

ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಆರೋಪ: ಪ್ರಕರಣ ದಾಖಲು

Update: 2023-12-15 19:31 IST

ಮಂಗಳೂರು, ಡಿ.15:ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದು ಬಳಿಕ ಕೆಲಸವನ್ನು ಕೊಡದೆ ಹಣ ವನ್ನೂ ಮರಳಿಸದೆ ವಂಚಿಸಿರುವ ಬಗ್ಗೆ ಮುಹಮ್ಮದ್ ಶಮ್ಲಾನ್ ಆಲಿ ಎಂಬಾತನ ವಿರುದ್ಧ ಅಸ್ತರ್ ಆಲಿ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಮುಹಮ್ಮದ್ ಶಮ್ಲಾನ್ ಆಲಿ 3 ಲಕ್ಷ ರೂ. ನೀಡಿದರೆ ಜಿದ್ದಾದ ಲೈನ್‌ಸೇಲ್ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಸಂಬಳ ಸಿಗುವ ಕೆಲಸ ಕೊಡಿಸುವುವೆ. ಅದಕ್ಕಾಗಿ ವೀಸಾ ಹಾಗೂ ಟಿಕೆಟ್ ಕಳುಹಿಸುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿದ ತಾನು ಚಿನ್ನಾಭರಣಗಳನ್ನು ಮಾರಾಟ ಮಾಡಿ ಆ.9ರಂದು 2 ಲಕ್ಷ ರೂ. ನೀಡಿದ್ದೆ. ಬಳಿಕ ಆರೋಪಿಯು ಜಿದ್ದಾಗೆ ತೆರಳಿ ಪುನಃ 1 ಲಕ್ಷ ರೂ. ಕೊಡಬೇಕೆಂದು ಹೇಳಿದ್ದರಿಂದ ತಾನು ಬಜಾಜ್ ಫೈನಾನ್ಸ್‌ನಿಂದ ಸಾಲ ಪಡೆದು ಹಣ ಕೊಟ್ಟಿದ್ದೆ. 1 ತಿಂಗಳಾದರೂ ಆರೋಪಿ ಟಿಕೆಟ್ ಮತ್ತು ವೀಸಾ ಕಳುಹಿಸದ ಕಾರಣ ಫೋನ್ ಮಾಡಿ ವಿಚಾರಿಸಿದೆ. ಆವಾಗ ಆರೋಪಿಯು ರಿಯಾದ್‌ಗೆ ಬರುವಂತೆ ತಿಳಿಸಿದ್ದು, ಅದರಂತೆ ತಾನು ಸೆ. 12ರಂದು 20,300 ರೂ. ಖರ್ಚು ಮಾಡಿ ಜಿದ್ದಾಕ್ಕೆ ಹೋಗಿದ್ದೆ. ಅಲ್ಲಿ ಆರೋಪಿಯು ತನಗೆ ಕೆಲಸ ಕೊಡಿಸದೆ ಒಂದು ರೂಮಿನಲ್ಲಿ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ರೂಮಿನಿಂದ ಹೊರಗೆ ಹೋದರೆ 10 ವರ್ಷ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ಅಸ್ತರ್ ಅಲಿ ದೂರಿನಲ್ಲಿ ತಿಳಿಸಿದ್ದಾರೆ.

ಆ ಬಳಿಕ ತನ್ನನ್ನು ವಾಪಸ್ ಊರಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡಾಗ ಆರೋಪಿಯು 80,000- ರೂ. ಕೊಡುವಂತೆ ತಿಳಿಸಿದ್ದ. ಹಾಗಾಗಿ ತನ್ನ ತಂದೆ ಇಬ್ರಾಹಿಂ ಆಲಿ ಹಾಗೂ ತನ್ನ ಹೆಂಡತಿಯು ಸಾಲ ಮಾಡಿ 69,000 ರೂ.ವನ್ನು ಆರೋಪಿ ಮುಹಮ್ಮದ್ ಶಮ್ಲಾನ್ ಅಲಿ ತಿಳಿಸಿದಂತೆ ರಫೀದಾ ಎಂಬವರಿಗೆ ಗೂಗಲ್-ಪೇ ಮಾಡಿ ಉಳಿದ ಹಣವನ್ನು ನಗದಾಗಿ ನೀಡಿದ್ದಾರೆ. ಆ ಬಳಿಕ ತಾನು ಅಲ್ಲಿಂದ ಬರಲು ಬಿಟ್ಟಿದ್ದಾರೆ ಎಂದು ಅಸ್ತರ್ ಅಲಿ ಆರೋಪಿಸಿ ದೂರು ನೀಡಿದ್ದಾರೆ.

ಅಸ್ತರ್ ಅಲಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News