ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯ ಅಗತ್ಯತೆ ಇದೆ: ಮಂಗಳೂರು ವಿವಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸುಧಾಕರ್
ಮುಡಿಪು: ಬಹಳಷ್ಟು ಪೋಷಕರು ತಮ್ಮ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಭವಿಷ್ಯದ ಸುಂದರ ಜೀವನ ರೂಪಿಸಿಕೊಳ್ಳುವ ಆತಂಕದಿಂದ ಶೈಕ್ಷಣಿಕವಾಗಿ ಮಾತ್ರ ಸಾಧನೆ ಮಾಡಲು ಹಾತೊರೆಯುತ್ತಾರೆ. ಹಾಗಾಗಿ ಕ್ರೀಡೆ, ಸಾಂಸ್ಕೃತಿಕವಾದ ಕ್ಷೇತ್ರ ಗಳಲ್ಲಿ ಪ್ರತಿಭೆಗಳು ಹೊರಬರುತ್ತಿಲ್ಲ. ಅದಕ್ಕಾಗಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯಗಳ ಅಗತ್ಯ ಇದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಶನಿವಾರ ಭೇಟಿ ನೀಡಿದ ಅವರು ಮಂಗಳಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡ ಮಂಗಳೂರು ವಿವಿ ತಂಡದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.
ಕೆಲವೊಂದು ಸಣ್ಣ ದೇಶಗಳಾದರೂ ಕ್ರೀಡಾ ಕ್ಷೇತ್ರದಲ್ಲಿಮಹತ್ತರ ಸಾಧನೆ ಮಾಡುತ್ತಿವೆ. ಆದರೆ ನಮ್ಮ ಇಷ್ಟು ದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದರೂ ಬೆರಳೆಣಿಕೆಯ ಕ್ರೀಡಾ ಸಾಧಕರಿರುವುದು ಬೇಸರದ ಸಂಗತಿ. ಆದ್ದರಿಂದ ಕ್ರೀಡೆಗೆ ಹೆಚ್ಚಿನ ಅವಕಾಶ,ಭದ್ರತೆಯನ್ನು ಒದಗಿಸಿಕೊಡುವ ಪರ್ಯತ್ನಗಳು ಅಗತ್ಯ ಎಂದರು.
ಇಂದು ಎಲ್ಲರಿಗೂ ಪದವಿಗಳನ್ನು ಕೊಡುತ್ತಿದ್ದೇವೆ. ಆದರೆ ಅವರಿಗೆ ಉದ್ಯೋಗವಕಾಶಗಳನ್ನು ಒದಗಿಸುವಲ್ಲಿ ಎಲ್ಲಿ ಎಡವುತ್ತಿ ದ್ದೇವೆ ಎಂಬುದನ್ನು ಗಮನಿಸುವ ಅಗತ್ಯ ವಿದೆ. ಜಾಗತಿಕ, ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ, ಹೊಸ ಹೊಸ ಶೈಕ್ಷಣಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ ಎಂದರು.
ಶಿಕ್ಷಕ ವೃತ್ತಿ ಎನ್ನುವಂತಹದ್ದು ಅತ್ಯಂತ ಪವಿತ್ರವಾದ ವೃತ್ತಿ. ಉತ್ತಮ ಶಿಕ್ಷಣ ಕೊಟ್ಟು ಮೌಲ್ಯಾಧಾರಿತ ವ್ಯಕ್ತಿಯನ್ನು ರೂಪಿ ಸುವ ಜವಬ್ಧಾರಿಯೂ ಅವರ ಮೇಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೊಫೆಸರ್, ಡೀನ್ ಯಾವಾಗ ಆಗೋದು ಎನ್ನುವ ಮನೋಭಾವನೆ ಹೆಚ್ಷಾಗುತ್ತಿದೆಯೇ ಕನಸು ವಿನಃ, ತಾನು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ ಚಿಂತನೆ ಕಡಿಮೆಯಾಗುತ್ತಿದೆ ಎಂದರು.
ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ವಿವಿ ಬೆಳೆದು ಬಂದ ಹಾದಿಯನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಮಂಗಳೂರು ವಿವಿ ಪರೀಕ್ಷಾಂಗ ಕುಲ ಸಚಿವ ಪ್ರೊ.ರಾಜು ಚಲ್ಲನ್ನನವರ್, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡ ಮಂಗಳೂರು ವಿವಿ ತಂಡದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ವಿಭಾಗದ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಅವರು ಪ್ರಶಸ್ತಿ ಪಡೆದ ಕಬ್ಬಡ್ಡಿ ತಂಡದ ಸದಸ್ಯರ ಪರಿಚಯ ಮಾಡಿದರು. ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಅವರು ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.