ಬದಕು ಬದಲಾಯಿಸಿದ ಸಾಕ್ಷರತೆ, ಸಂಘಟನೆ - ಯಶೋಧ ಲಾಯಿಲಾ
ಮುಡಿಪು: ಅಕ್ಷರಾಭ್ಯಾಸ ಇಲ್ಲದ ಸಂದರ್ಭ ಸಮಾಜ ನಮ್ಮನ್ನು ಕೀಳಾಗಿ ನೋಡುತ್ತಿದ್ದ ಕಾರಣ ನಾಲ್ಕು ಗೋಡೆಯ ಒಳಗೆ ಇದ್ದೆವು. ಬಳಿಕ ಅಡೆತಡೆಗಳ ನಡವೆಯೂ ಸಾಕ್ಷರತೆಯಲ್ಲಿ ಕಲಿತು ಇತರರಿಗೆ ಕಲಿಸುವಂತಾಗಿದೆ. ಸಾಕ್ಷರತೆ, ಸಂಘಟನೆ ಯಿಂದ ಬದುಕು ಬದಲಾಯಿಸಲು ಸಾಧ್ಯ ವಾಯಿತುಎಂದು ಲಾಯಿಲಾ ನಿವಾಸಿ ಯಶೋಧಾ ಹೇಳಿದರು.
ಅವರು ಮುಡಿಪು ಜನಶಿಕ್ಷಣ ಟ್ರಸ್ಟ್ ಮತ್ತು ವಿವಿಧ ಸಂಘ-ಸಂಸ್ಥೆಗಳು ಆಶ್ರಯದಲ್ಲಿ ಮಂಗಳವಾರ ನಡೆದ ನವಸಾಕ್ಷರರ ಸಂಘಟನೆಯ 32ನೇ ವರ್ಷದ 'ಅಕ್ಷರೋತ್ಸವ-ಸ್ವಚ್ಛೋತ್ಸವ-2023' ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತಿಯ ಕುಡಿತದ ಚಟ ಬಿಡಿಸಿದೆ. ಬಳಿಕ ಸಾಕಷ್ಟು ಬೆದರಿಕೆ ಎದುರಿಸಿ 227 ಜನರನ್ನು ಕುಡಿತ ಮುಕ್ತಗೊಳಿಸಿದೆ, 97 ಬಾಲಕಾರ್ಮಿಕರನ್ನು ಮರಳಿ ಶಾಲೆಗೆ ಸೇರಿಸಿದೆ. ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ ಎಂದು ಯಶೋಧ ಹೇಳಿದರು.
ದೇರಳಕಟ್ಟೆ ಕೆ.ಎಸ್. ಆಸ್ಪತ್ರೆಯಲ್ಲಿ ಕಾಯಂ ಕಾರ್ಮಿಕ ಆಗಿದ್ದು 11 ಸಾವಿರ ವೇತನ, ಹತ್ತು ಸಾವಿರ ಕೈಗೆ ಬರುತ್ತದೆ. ಐದೂವರೆ ಲಕ್ಷ ಲಾನ್ ಪಡೆದು ಇನ್ನಷ್ಟು ಹಣ ಹಾಕಿ ಆರ್ ಸಿಸಿ ಮನೆ ನಿರ್ಮಿಸಿದ್ದೇನೆ ಎಂದು ಆದಿವಾಸಿ ಬಾಳೆಪುಣಿಯಲ್ಲಿ ವಾಸವಿರುವ ರತ್ನ ತಿಳಿಸಿದರು.
ಸುಳ್ಯ ಗುತ್ತಿಗಾರಿನ ಅಕ್ಕಮ್ಮ ಮಾತನಾಡಿ, ಸಾಕ್ಷರತೆಗೆ ಸೇರಿದ್ದರಿಂದ ಜೀವನ ಪಾಠ ಕಲಿತೆವು. ಸಾಕ್ಷರತೆಯಿಂದಾಗಿ ಮನೆಯಿಂದ ಹೊರಬಂದು ನಾಲ್ಕಕ್ಷರ ಓದಲು, ಮಾತನಾಡಲು ಗೊತ್ತಿದೆ ಎಂದರು.
ಸುಳ್ಯ ಕಲ್ಮಂಕರ್ ನಿವಾಸಿ, ಶಾಲೆ ಮೆಟ್ಟಿಲು ಹತ್ತಿಲ್ಲ, ನಮ್ಮ ಊರಿಗೆ ಸಾಕ್ಷರತೆಗಾಗಿ ಬಂದಾಗ ಗದರಿಸಿ ಕಳಿಸಿದೆ. ಬಳಿಕ ಮಾನವನಾಗಬೇಕೆನ್ನುವ ತವಕದಲ್ಲಿ ಅಕ್ಷರ ಕಲಿತೆ ಎಂದು ನಾಲ್ಕು ಬಾರಿ ಎಸ್ಸೆಸ್ಸೆಎಲ್ಸಿ ಕುಳಿತು ಫೇಲ್ ಆದ ನಾರಾಯಣ ತಿಳಿಸಿದರು.
ಸಂವಾದದ ನಡುವೆ ನೃತ್ಯ, ಹಾಡಿನ ಮೂಲಕ ನೆರೆದವರ ಮನಸ್ಸಿಗೆ ಮುದ ನೀಡಲಾಯಿತು. ಪುತ್ತೂರಿನ ಬನ್ನೂರು ಗ್ರಾಮ ಬೀರಿಗದ ಮಾದರಿ ಗ್ರಾಮ ವಿಕಾಸ ಕೇಂದ್ರದ ನಾಲ್ವರು ದಂಪತಿಗಳ ಜಾನಪದ ನೃತ್ಯ ಗಮನ ಸೆಳೆಯಿತು.
ಈ ಸಂದರ್ಭ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿ ಪಡೆದ ಸ್ಕಿಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಂಗನವಾಡಿ ಪುಟಾಣಿ ಕುಶಾನ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶಾರದಾ ಆಯುರ್ವೇದ ಆಸ್ಪತ್ರೆಯ ಸಂದೀಪ್ ಬೇಕಲ್, ಜನಜೀವನ ಅಧ್ಯಕ್ಷ ರಮೇಶ್ ಶೇಣವ, ಲಯನ್ಸ್ ಕ್ಲಬ್ ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ ಉಮಿಯ, ಸೆಲ್ಕೋ ಮಂಗಳೂರು ವ್ಯವಸ್ಥಾಪಕ ರವೀಣಾ ಬಿ., ಚಂದ್ರಶೇಖರ್ ಪಾತೂರು, ಪುರುಷೋತ್ತಮ ಮೂಡೂರು, ಅರುಣಾ ಬೀರಿಗ,ಶಕಿಲಾ ಪೂಜಾರಿ, ಇಸ್ಮಾಯಿಲ್ ಕಣಂತೂರು, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯ ರೈ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಲಾಕ್ಷಿ ,ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಉಮ್ಮರ್, ಮಾಜಿ ಅಧ್ಯಕ್ಷ ರಝಾಕ್ ,ಸಾಯಿದಾ ,ಪತ್ರಕರ್ತರಾದ ಪುಷ್ಪ ರಾಜ್.ಬಿ.ಎನ್,ಭಾಸ್ಕರ್ ರೈ ಕಟ್ಟ,ಅನ್ಸಾರ್ ಇನೋಳಿ ಇನ್ನಿತರರು ಉಪಸ್ಥಿತರಿದ್ದರು. ನರೇಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.
'ಕಸಮುಕ್ತ, ವ್ಯಸನಮುಕ್ತ, ಹಿಂಸಾಮುಕ್ತ, ಸ್ವಚ್ಛಗ್ರಾಮ' ವಿಷಯದಲ್ಲಿ ಸಂವಾದ ಸಂಕಲ್ಪ ನಡೆಯಿತು. ಮಂಗಳೂರು ವಿವಿ ಸಮಾಜಕಾರ್ಯ ವಿಭಾಗ ಪ್ರಾಧ್ಯಾಪಕಿ ಡಾ.ಯಶಸ್ವಿನಿ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಮಾಡಬೇಕೆನ್ನುವ ನೆಲೆಯಲ್ಲಿ ಮಾಡುತ್ತೀರಾ, ಅದನ್ನು ಮುಂದಕ್ಕೆ ಹೇಗೆ ಕೊಂಡೊಯ್ಯುತ್ತೀರಿ ಎಂದು ಪ್ರಶ್ನಿಸಿದರು.
ಮಕ್ಕಳು ಗ್ರಾಮಸಭೆ ಪಂಚಾಯಿತಿಯಲ್ಲಿ ನಡೆಯುವಾಗ ಶಿಕ್ಷಕರು ಬರೆದು ಕೊಡುವ ಸಮಸ್ಯೆಗಳನ್ನು ನಾಲ್ಕೈದು ಮಕ್ಕಳು ಬಂದು ಹೇಳುತ್ತಾರೆ. ಅದರ ಬದಲು ಶಾಲೆಯಲ್ಲೇ ನಡೆಯಲಿ ಎಂದು ಸುಗ್ರಾಮ ಬಂಟ್ವಾಳ ಅಧ್ಯಕ್ಷೆ ಶಕೀಲಾ ಕಾಳಜಿ ವ್ಯಕ್ತಪಡಿಸಿದರು.
ಸಂವಾದ ಸಂಕಲ್ಪದಲ್ಲಿ ಮಾತನಾಡಿದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ನರಿಂಗಾನ, ಬಾಳೆಪುಣಿ, ಇರಾ ಗ್ರಾಮದಲ್ಲಿ ಸಾವಿರ ಮನೆಗಳಲ್ಲಿ ಮಲ್ಲಿಗೆ ಕೃಷಿ ಮಾಡುವ ನಿಟ್ಟಿನಲ್ಲಿ ನರೇಗಾದಿಂದ ಅನುದಾನ ನೀಡಬೇಕು ಎಂದು ತಿಳಿಸಿದರು.
ಐದು ಎಕರೆ ಒಳಗೆ, ಒಂದು ಎಕರೆ ಜಾಗ ಇದ್ದು ಎಪಿಎಲ್ ಕಾರ್ಡ್ ಇದ್ದವರು ತಹಸೀಲ್ದಾರ್ ಬಳಿ ಸಣ್ಣ ರೈತ ಪ್ರಮಾಣಪತ್ರ ಪಡೆದರೆ ನರೇಗಾದಿಂದ ಹಣ ನೀಡಲಾಗುತ್ತದೆ. ಎಸ್ಸಿ-ಎಸ್ಟಿ ಮನೆಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ಕುಟುಂಬದೊಳಗಿನ ಒಳಜಗಳದಿಂದ ಪರಿಣಾಮಕಾರಿ ಬೆಳವಣಿಗೆ ಕಾಣುತ್ತಿಲ್ಲ ಎಂದು ಅಧಿಕಾರಿ ತಿಳಿಸಿದರು.
ನರಿಂಗಾನ ಗ್ರಾ.ಪಂ.ಅಧ್ಯಕ್ಷ ನವಾಝ್ ಕಲ್ಲರಕೋಡಿ, ಕುರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಗಟ್ಟಿ, ಆಕಾಶವಾಣಿ ನಿರೂಪಕ ಶ್ಯಾಮ್ ಭಟ್, ಸೆಲ್ಕೋ ವ್ಯವಸ್ಥಾಪಕ ರವೀಣಾ ಬೋಳಿಯಾರ್, ಪಂಚಾಯಿತಿ ಪ್ರತಿನಿಧಿಗಳು ಭಾಗವಹಿಸಿದ್ದರು.