×
Ad

ಹೊಸ ವರ್ಷಾಚರಣೆ: ನಿಯಮ ಪಾಲಿಸಲು ಮಂಗಳೂರು ಪೊಲೀಸ್ ಕಮಿಷನರ್ ಸೂಚನೆ

Update: 2023-12-21 20:29 IST

ಸಾಂದರ್ಭಿಕ ಚಿತ್ರ

ಮಂಗಳೂರು : ಹೊಸ ವರ್ಷಾಚರಣೆ (ಡಿ.31)ಯ ನಿಟ್ಟಿನಲ್ಲಿ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ಸಂಘ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಕಾನೂನು ವ್ಯಾಪ್ತಿಯಲ್ಲಿ ರೂಪಿಸಲಾದ ನಿಯಮಗಳನ್ನು ಪಾಲಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಹೊಸ ವರ್ಷ ಆಚರಿಸುವವರು ಸಂಘ ಸಂಸ್ಥೆಗಳು, ಹೊಟೇಲ್,ರೆಸ್ಟೋರೆಂಟ್, ಕ್ಲಬ್‌ನವರು ಡಿ.28ರ ಸಂಜೆ 5ರೊಳಗೆ ಆಯುಕ್ತಾಲಯದ ಕಚೇರಿಯಿಂದ ನಿಗದಿತ ಅರ್ಜಿ ಫಾರಂ ಪಡೆದು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಸರಕಾರ ಕೋವಿಡ್ ನಿಯಮ ಜಾರಿಗೊಳಿಸಿದರೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಡಿ.31ರ ರಾತ್ರಿ 12ಕ್ಕೆ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು, ಸಮುದ್ರ ಕಿನಾರೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸುವವರು ಸಂಯಮ ಪಾಲಿಸಬೇಕು. ಯಾವುದೇ ರೀತಿಯಲ್ಲೂ ಅಸಭ್ಯವಾಗಿ ವರ್ತಿಸಬಾರದು. ಅಶ್ಲೀಲ ನೃತ್ಯಕ್ಕೂ ಅವಕಾಶವಿಲ್ಲ. ಸಂಭ್ರಮದ ನೆಪದಲ್ಲಿ ಯಾರಿಗೂ ತೊಂದರೆ ಕೊಡಬಾರದು.

ಶಬ್ಧ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಆದೇಶ ಪಾಲಿಸಬೇಕು. ಡಿಜೆಗೆ ಯಾವುದೇ ಅವಕಾಶವಿಲ್ಲ. 18 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಮದ್ಯ ಪೂರೈಕೆ ಮಾಡುವಂತಿಲ್ಲ. 18 ವರ್ಷ ಪ್ರಾಯದೊಳಗಿನ ಮಕ್ಕಳ ಹೆತ್ತವರು/ಪೋಷಕರು ಇಲ್ಲದಿದ್ದರೆ ಹೊಟೇಲ್, ಕ್ಲಬ್ ಅಥವಾ ವಿಶೇಷ ಕೂಟದ ಆಯೋಜಕರು ಆ ಮಕ್ಕಳಿಗೆ ಪ್ರವೇಶ ನೀಡಬಾರದು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಒಂದು ವೇಳೆ ಈ ನಿಯಮಗಳನ್ನು ಮೀರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News