ಕಲೆ - ಶಿಕ್ಷಣದಿಂದ ಅರ್ಥಪೂರ್ಣ ಬದುಕು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಪುಸ್ತಕ ಓದುವುದರಿಂದ ನಮಗೆ ಜ್ಞಾನ ಸಿಗುತ್ತದೆ. ಆದರೆ ನಮಗೆ ಜ್ಞಾನ ಮತ್ತು ಅರ್ಥಪೂರ್ಣವಾದ ಬದುಕು ಸಿಗುವುದು ಕಲೆ ಮತ್ತು ಶಿಕ್ಷಣದಿಂದ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್ ಹಾಗೂ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ವತಿಯಿಂದ ಶುಕ್ರವಾರ ಕಾಲೇಜಿನಲ್ಲಿ ನಡೆದ ಅಂತರ ಮಹಾ ವಿದ್ಯಾಲಯಗಳ ಯುವ ಜನೋತ್ಸವ ಕಾರ್ಯಕ್ರಮ ಮತ್ಸ್ಯ ಕಲಾಪರ್ವ -2023 ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಐಎಎಸ್‌ನಲ್ಲಿ ಆಯ್ಕೆಯಾಗಲು ನನ್ನಲ್ಲಿರುವ ಆತ್ಮವಿಶ್ವಾಸ ಕಾರಣವಾದರೆ, ಅಂತಹ ಅತ್ಮವಿಶ್ವಾಸ ನನಗೆ ಸಿಕ್ಕಿರುವುದು ಕಾಲೇಜಿನ ದಿನಗಳಲ್ಲಿ ನಾವು ಭಾಗವಹಿಸಿದ ಅಂತರ್ ಕಾಲೇಜು ಸೇರಿದಂತೆ ಇನ್ನಿತರ ಸ್ಪರ್ಧೆಗಳಿಂದ. ಸ್ಪರ್ಧೆಗಳು ಕೇವಲ ಮನರಂಜನೆ, ಆಸಕ್ತಿಗೋಸ್ಕರ ಮಾತ್ರ ಅಲ್ಲ, ಜೀವನದಲ್ಲಿ ಯಾವಾಗಲೂ ಮರೆಯಲಾಗದ ಅಮೂಲ್ಯವಾದ ನೆನಪುಗಳನ್ನು ನೀಡುತ್ತವೆ ಎಂದವರು ಹೇಳಿದರು.
ಮೀನುಗಾರಿಕೆಯಲ್ಲಿರುವ ಸಮಸ್ಯೆಗಳಿಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು. ಬೇರೆ ದೇಶದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದ್ದರಿಂದ ಸಮಸ್ಯೆಗಳಾಗುತ್ತಿದೆ. ಆದರೆ ನಮ್ಮವರೇ ಇದಕ್ಕೆ ಪರಿಹಾರ ಹುಡುಕಿದಾಗ ಯಶಸ್ಸು ಸಾಧ್ಯ. ಆದ್ದರಿಂದ ಮೀನುಗಾರಿಕೆಯಲ್ಲಿ ಹೊಸ ಹೊಸ ಅವಿಷ್ಕಾರಗಳು ಆಗಬೇಕು ಎಂದರು.
ಕಾರ್ಯಕ್ರಮವನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್ ಇದರ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಉದ್ಘಾಟಿಸಿ, ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಭಾರತದಲ್ಲಿ ಯುವ ಶಕ್ತಿ ಅಗಾಧವಾಗಿದ್ದು ಅದನ್ನು ಚೆನ್ನಾಗಿ ಬಳಸಿಕೊಂಡು ನಾವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಟ, ನಿರ್ದೇಶಕ ಮೈಮ್ ರಾಮ್‌ದಾಸ್ ಜನಪದ ಹಾಡನ್ನು ಹಾಡಿ, ಸಂಸ್ಕೃತಿಯನ್ನು, ಜನಪದೀಯ ಕಲೆಯನ್ನು ಉಳಿಸುವ ಕೆಲಸವಾಗಬೇಕು ಎಂದರು.
ಫಿಶರೀಸ್ ಕಾಲೇಜಿನ ಡೀನ್ ಡಾ. ಎಚ್.ಎನ್. ಆಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ನಟಿ ಶೈಲಾಶ್ರೀ ಮುಲ್ಕಿ, ಸ್ಟೂಡೆಂಟ್ ವೆಲ್ಪೇರ್ ಇದರ ನಿರ್ದೇಶಕ ಡಾ. ತಾಂಡ್ಲೆ ಎಂ.ಕೆ., ಮಾಜಿ ಡೀನ್ ಡಾ. ಎಸ್.ಎಂ ಶಿವಪ್ರಕಾಶ್, ಡಾ. ಗಣೇಶ್ ಉಡುಪ, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಡಾ. ಕುಮಾರ್ ನಾಯ್ಕ್ ಎ.ಎಸ್. ಸ್ವಾಗತಿಸಿದರು. ಡಾ. ಜಯ ನಾಯ್ಕ್ ವಂದಿಸಿದರು. ಪ್ರೊ. ವಂದನಾ ಕೆ. ಕಾರ್ಯಕ್ರಮ ನಿರೂಪಿಸಿದರು.