ಹೆದ್ದಾರಿಯ ಕಳಪೆ, ಅವೈಜ್ಞಾನಿಕ ಕಾಮಗಾರಿ ಆರೋಪ: ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರಿಗೆ ದೂರು
ಬಜ್ಪೆ: ಚತುಷ್ಪಥ ಹೆದ್ದಾರಿಯ ಕಳಪೆ, ಅವೈಜ್ಞಾನಿಕ ಕಾಮಗಾರಿ ಮತ್ತು ಪಿಡ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನದ ಕುರಿತು ಬಜ್ಪೆ ನಾಗರಿಕ ಹೋರಾಟ ಸಮಿತಿಯು ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡಿತು.
ಶುಕ್ರವಾರ ಮಂಗಳೂರು ಪ್ರವಾಸದಲ್ಲಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಚಿವರನ್ನು ಭೇಟಿಯಾದ ಹೋರಾಟ ಸಮಿತಿಯ ಮುಖಂಡರು, ಸಚಿವರನ್ನು ಸ್ಥಳಕ್ಕೆ ಕರೆತಂದು ಚತುಷ್ಪಥ ಹೆದ್ದಾರಿಯ ಕಳಪೆ, ಅವೈಜ್ಞಾನಿಕ ಕಾಮಗಾರಿ ಮತ್ತು ಪಿಡ್ಲ್ಯೂಡಿ ಅಧಿಕಾರಿಗಳ ಬೇಜವ್ದಾರಿತನವನ್ನು ತಿಳಸಿದರು. ಈ ವೇಳೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ಅವರು ಸಚಿವರಿಗೆ ರಸ್ತೆ ಕಾಮಗಾರಿ ಮತ್ತು ಪಿಡ್ಲ್ಯೂಡಿ ಇಲಾಖಾಧಿಕಾರಿಗಳ ನಿರ್ಲಕ್ಷದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿದ ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕಾಗಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಹವಾಲು ಆಲಿಸಿದ ಸಚಿವರು ಸಂಜೆ ಪಿಡ್ಲ್ಯೂಡಿ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ಮಾಹಿತಿ ಪಡೆದು ಬಳಿಕ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಸಚಿವರೊಂದಿಗೆ ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್, ದಲಿತ ಸಂಘಟನೆಯ ರಾಜ್ಯ ಸಂಚಾಲಕರಾದ ದೇವದಾಸ್, ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ ,ಗ್ರಾ.ಪಂ. ಮಾಜಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಮತ್ತು ಬಜ್ಪೆ ನಾಗರಿಕರು ಇದ್ದರು.