×
Ad

ಕರಾವಳಿಯಲ್ಲಿ ಕ್ರಿಸ್ಮಸ್ ಸಂಭ್ರಮ

Update: 2023-12-25 18:21 IST

ಮಂಗಳೂರು: ಏಸು ಕ್ರಿಸ್ತರ ಜನ್ಮ ದಿನವನ್ನು ಆಚರಿಸುವ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತರು ಸೋಮವಾರ ಕರಾವಳಿಯಲ್ಲಿ ಸಂಭ್ರಮಿಸಿದರು. ಕ್ರಿಸ್ಮಸ್ ಪ್ರಯುಕ್ತ ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ನೆರವೇರಿತು.

ಮುಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ರವಿವಾರ ಕ್ರಿಸ್ಮಸ್ ಈವ್‌ನ ಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸಿದ್ದರೆ, ಸೋಮವಾರ ಮುಂಜಾನೆ ಕ್ರಿಸ್ಮಸ್ ಪೂಜೆಯನ್ನು ನಗರ ಹೊರವಲಯದ ತಣ್ಣೀರುಬಾವಿ ಫಾತಿಮಾ ಚರ್ಚ್‌ನಲ್ಲಿ ನೆರವೇರಿಸಿದರು.

ಬಳಿಕ ಮಾತನಾಡಿದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಬಡತನವನ್ನು ಸಂಕೇತಿಸುವ ಗೋದಲಿಯಲ್ಲಿ ಜನಿಸಿದ ಏಸುಕ್ರಿಸ್ತರು ಬಡವರು ಹಾಗೂ ಸಮಾಜದಲ್ಲಿ ಕಡೆಗಣಿಸಿದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.

ಚರ್ಚ್‌ನ ಧರ್ಮಗುರುಗಳಾದ ಫಾ.ಲಾರೆನ್ಸ್ ಡಿಸೋಜ, ಫಾದರ್ ಗೊಮ್ಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡಾರ್ವಿನ್ ಕುವೆಲ್ಲೊ, ಕಾರ್ಯದರ್ಶಿ ತೆಲ್ಮಾ ಡಿಸೋಜ ಉಪಸ್ಥಿತರಿದ್ದರು.

ಮನೆ ಮತ್ತು ಚರ್ಚ್‌ಗಳಲ್ಲಿ ಕ್ರಿಸ್ಮಸ್ ಟ್ರೀ ಹಾಗೂ ನಕ್ಷತ್ರಗಳು, ಗೋದಲಿಗಳು ಮುಖ್ಯ ಆಕರ್ಷಣೆಯಾಗಿದ್ದವು. ಕೆಲವು ಐಷಾರಾಮಿ ಹೊಟೇಲ್‌ಗಳು ಕೂಡ ಗ್ರಾಹಕರನ್ನು ಸೆಳೆಯಲು ಹೊರಭಾಗದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಿದ್ದರೆ, ಒಳಭಾಗದಲ್ಲಿ ವಿಶೇಷ ಔತಣ ಕೂಟಗಳನ್ನು ಏರ್ಪಡಿಸಿದ್ದವು. ಕ್ರಿಸ್ಮಸ್ ಬಲಿಪೂಜೆಗೂ ಮುನ್ನ ಕ್ರಿಸ್ಮಸ್ ಸಂದರ್ಭದ ವಿಶೇಷ ಗೀತೆಗಳ ಕ್ಯಾರಲ್ಸ್ ನಡೆಯಿತು.

ಕ್ರಿಸ್ಮಸ್ ಕಾರ್ಯಕ್ರಮ: ಹಬ್ಬದ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಿರಿಯರು ಜತೆಗೂಡಿದ ಹಾಸ್ಯ ಪ್ರಹಸನಗಳು, ಮನೋರಂಜನಾ ನೃತ್ಯದ ಜತೆಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂತಾಕ್ಲಾಸ್‌ನಿಂದ ಸಿಹಿತಿಂಡಿಯ ವಿತರಣೆ ನಡೆಯಿತು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News