ಹೆಚ್ಚುತ್ತಿರುವ ವಿದ್ಯುತ್ ವ್ಯತ್ಯಯ, ಕೈಗಾರಿಕೆಗಳಿಗೆ ತೊಂದರೆ: ಎಚ್‌ಟಿ ಗ್ರಾಹಕರ ಸಂವಾದದಲ್ಲಿ ಮೆಸ್ಕಾಂಗೆ ದೂರು
ಮಂಗಳೂರು: ವಿದ್ಯುತ್ ಪೂರೈಕೆಯಲ್ಲಿ ಹೆಚ್ಚುತ್ತಿರುವ ವ್ಯತ್ಯಯ, ಲೋ ವೋಲ್ಟೇಜ್ ಸೇರಿದಂತೆ ನಾನಾ ರೀತಿಯ ತೊಂದರೆಗಳಿಂದ ಕೈಗಾರಿಕಾ ವಲಯಕ್ಕೆ ತೊಂದರೆಯಾಗುತ್ತಿದೆ. ವಿದ್ಯುತನ್ನೇ ಅವಲಂಬಿಸಿ ನಡೆಸಲಾಗುತ್ತಿರುವ ಅಡುಗೆ ಎಣ್ಣೆ ಸಂಸ್ಕರಣಾ ಘಟಕಗಳು ಸೇರಿದಂತೆ ಉದ್ಯಮ ಕ್ಷೇತ್ರಕ್ಕೆ ಪದೇ ಪದೇ ವಿದ್ಯುತ್ ಕಡಿತದಿಂದ ಗುಣಮಟ್ಟ ಮಾತ್ರವಲ್ಲದೆ, ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆಕ್ಷೇಪ ಎಚ್‌ಟಿ ವಿದ್ಯುತ್ ಗ್ರಾಹಕರಿಂದ ವ್ಯಕ್ತವಾಗಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲೆಯ ಎಚ್.ಟಿ. ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ಈ ದೂರುಗಳು ವ್ಯಕ್ತವಾಗಿದ್ದು, ಇದಕ್ಕೆ ಪೂರಕವಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ನೀಡಿದರು.
ಅದಾನಿ ಗ್ರೂಪ್‌ನ ಪ್ರಸಾದ್ ಎಂಬವರು ಮಾತನಾಡಿ, ಸುರತ್ಕಲ್ ಮತ್ತು ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ಒಂದೇ ಲೈನ್‌ನಲ್ಲಿ ವಿದ್ಯುತ್ ಸಂಪರ್ಕ ಇರುವುದರಿಂದ ತೊಂದರೆಯಾಗುತ್ತಿದೆ. ನಿರ್ವಹಣೆ, ರಿಪೇರಿ ಸೇರಿದಂತೆ ನಾನಾ ರೀತಿಯ ತುರ್ತು ಕಾಮಗಾರಿಗಳಿಗಾಗಿ ಹಲವು ಬಾರಿ ವಿದ್ಯುತ್ ಕಡಿತವಾಗುವುದರಿಂದ ಕಂಪನಿಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ಒಮ್ಮೆ ವಿದ್ಯುತ್ ಸ್ಥಗಿತವಾದರೆ ಮತ್ತೆ ಕಂಪನಿಯ ಯಂತ್ರಗಳು ಕಾರ್ಯಾರಂಭಿಸಲು ಒಂದರೆಡು ಗಂಟೆ ಹಿಡಿಯುತ್ತದೆ. ನಮ್ಮದು ಅಡುಗೆ ಎಣ್ಣೆಯ ಸಂಸ್ಕರಣಾ ಘಟಕವಾಗಿರುವುದರಿಂದ ಇದು ಎಣ್ಣೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಐಡಿಯಲ್ ಐಸ್‌ಕ್ರೀಂ ಕಿನ್ನಿಗೋಳಿ ಘಟಕದ ಮುಖ್ಯಸ್ಥರು ಕೂಡಾ ಇದೇ ಸಮಸ್ಯೆಯನ್ನು ವಿವರಿಸುತ್ತಾ, ವಿದ್ಯುತ್ ಪೂರೈಕೆ ಯಲ್ಲಿನ ಅಡಚಣೆ ಹೆಚ್ಚಾಗುತ್ತಚಿರುವುದರಿಂದ ಯಂತ್ರಗಳು ಹಾಳಾಗುತ್ತಿವೆ. ಈಗಾಗಲೇ ಈ ಬಗ್ಗೆ ದೂರು ನೀಡಲಾಗಿದೆ ಎಂದರು.
ಕ್ರೈಡೈನ ವಿನೋದ್ ಪಿಂಟೋ ಮಾತನಾಡಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ರಿಯಲ್ ಎಸ್ಟೇಟ್‌ನ ಹಬ್ ಆಗಿದೆ. ಅದಲ್ಲದೆ ಇದೀಗ ಪ್ರಸಕ್ತ ಸಾಲಿನಲ್ಲಿ ಹಲವು ಐಟಿ ಕಂಪನಿಗಳು ಇಲ್ಲಿ ತಲೆ ಎತ್ತಲು ತಯಾರಿ ನಡೆಸಿವೆ. ಹಾಗಾಗಿ ಅದಕ್ಕೆ ಪೂರಕವಾಗಿ ವಿದ್ಯುತ್ ಪೂರೈಕೆ ಮುಖ್ಯ ಆದ್ಯತೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಮೆಸ್ಕಾಂ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಕಡಿತದ ಜತೆಗೆ ಲೋ ವೋಲ್ಟೇಜ್ ಕಾರಣದಿಂದ ಕೈಗಾರಿಕೆಗಳಲ್ಲಿ ಮೋಟಾರುಗಳು ಸುಟ್ಟುಹೋಗಿ ತಿಂಗಳಿಗೆ ಲಕ್ಷಗಟ್ಟಲೆ ರಿಪೇರಿಗೆ ಖರ್ಚಾಗುತ್ತಿದೆ ಎಂದು ಕೋಣಾಜೆ ಕಂಬಳಪದವು, ಬೈಕಂಪಾಡಿ ಕೈಗಾರಿಕಾ ವಲಯದ ಕೈಗಾರಿ ಕೋದ್ಯಮಿಗಳೇನಕರು ಸಭೆಯಲ್ಲಿ ಅಹವಾಲು ಸಲ್ಲಿಸಿದರು.
ಬಹುಮಹಡಿ ವಸತಿ ಕಟ್ಟಡಗಳ ವಿದ್ಯುತ್ ಸಂಪರ್ಕ ಎಚ್‌ಟಿ (ಹೈ ಟೆನ್ಶನ್)ಯಲ್ಲಿದ್ದು, ಮನೆ ಬಾಡಿಗೆದಾರರು, ಅಥವಾ ಮಾಲಕರು ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ. ಇದರಿಂದ ಆ ಬಿಲ್ಡಿಂಗ್ ಅಸೋಸಿಯೇಶನ್‌ಗೆ ಹೊರೆಯಾಗುತ್ತಿದೆ. ಎಚ್‌ಟಿ ಸಂಪರ್ಕವನ್ನು ಎಲ್‌ಟಿ (ಲೋ ಟೆನ್ಶನ್) ಸಂಪರ್ಕಕ್ಕೆ ಮಾರ್ಪಾಡು ಮಾಡಬೇಕು ಎಂದು ಹಲವು ಕಟ್ಟಡಗಳ ಮುಖ್ಯಸ್ಥರು ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಂಡಿ ಪದ್ಮಾವತಿ, ಹಿಂದೆ ಬಹುಮಹಡಿ ಕಟ್ಟಡಗಳಿಗೆ ೫೦ ಕೆವಿ ಮೇಲ್ಪಟ್ಟು ಎಚ್‌ಟಿ ಸಂಪರ್ಕ ಪಡೆಯುವುದು ಕಡ್ಡಾಯವಾಗಿದ್ದು, ಇದೀಗ ಅದನ್ನು 150 ಕೆವಿಗೆ ವಿಸ್ತರಿಸಲಾಗಿದೆ. ಹಾಗಾಗಿ ಇಂತಹ ದೂರಗಳನ್ನು ಪರಿಗಣಿಸಿ ಕ್ರಮ ವಹಿಸಲಾಗುವುದು ಎಂದರು.
ಕೆಸಿಸಿಐ ಅಧ್ಯಕ್ಷ ನಝೀರ್, ಶಾಲಿಮಾರ್ ಕಾಂಪ್ಲೆಕ್ಸ್‌ನ ಝಕರಿಯಾ, ಸಮ್ಮರ್ ಸ್ಯಾಂಡ್‌ನ ಅಲೋಶಿಯ್ ಅಲ್ಬುಕರ್ಕ್, ಬ್ರೈಟ್ ಪ್ಯಾಕೇಜ್‌ನ ನಾಗೇಶ್, ಕಾವೂರು ವಾಣಿಜ್ಯ ಕಟ್ಟಡದ ಪ್ರಕಾಶ್ ಡಿಸೋಜಾ, ದಯಾನಂದ ಹೆಗಡೆ, ಕೆಐಒಸಿಎಲ್‌ನ ಮಾಲಿನಿ, ಕೃಷ್ಣ ನಾಯಕ್ ಪುತ್ತೂರು, ಸಂತೋಷ್ ನಾಯಕ್ ಮೊದಲಾದವರು ಸಂವಾದದಲ್ಲಿ ತಮ್ಮ ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ಮೆಸ್ಕಾಂ ನಿರ್ದೇಶಕ (ತಾಂತ್ರಿಕ) ಎಚ್.ಜಿ. ರಮೇಶ್, ಮುಖ್ಯ ಇಂಜಿನಿಯರ್ ಪುಷ್ಪಾ, ಅಪರ ಮುಖ್ಯ ಪರಿವೀಕ್ಷಕ ಸುದೇಶ್ ಮಾರ್ಟಿಸ್, ಲೆಕ್ಕ ಪರಿಶೋಧಕ ಹರಿಶ್ಚಂದ್ರ, ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಮೊದಲಾದವರು ಉಪಸ್ಥಿತರಿದ್ದರು.
ಕಾವೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್ ಸ್ವಾಗತಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.
ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜು ಅವರು ಮಂಗಳೂರು ವ್ಯಾಪ್ತಿಯ ಎಚ್‌ಟಿ ಸಂಪರ್ಕಗಳ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ವ್ಯಾಪ್ತಿಯಲ್ಲಿ 1182 ಎಚ್‌ಟಿ ಗ್ರಾಹಕರಿದ್ದು, ಶಿರ್ತಾಡಿ, ಕೋಟೆಕಾರ್ ಹಾಗೂ ನೆಲ್ಯಾಡಿಯಲ್ಲಿ ೩೩/೧೧ ಕೆವಿ ಹೊಸ ವಿದ್ಯುತ್ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ವೃದ್ಧಾಶ್ರಮಕ್ಕೆ ರಿಯಾಯಿತಿ ಒದಗಿಸಿ
ಕುಲಶೇಖರದಲ್ಲಿ ನಾವು ನಡೆಸುತ್ತಿರುವ ಹಿರಿಯ ನಾಗರಿಕರ ಆಶ್ರಮ ಲಾಭೇತರ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಗೆ ಎಚ್‌ಟಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ವಿವಿಧ ಕಡೆಗಳಲ್ಲಿ ಇಂತಹ ಆಶ್ರಮಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದ್ದು, ನಮ್ಮ ಸಂಸ್ಥೆಗೂ ಆ ವ್ಯವಸ್ಥೆ ಮಾಡಿ ಎಂದು ಹಿರಿಯ ನಾಗರಿಕರ ಆಶ್ರಮದ ಸಿಸ್ಟರ್ ಥಾಮಸಿನ್ ಮರಿಯಾ ಅವರು ಆಗ್ರಹಿಸಿದರು. ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮೆಸ್ಕಾಂ ಎಂಡಿ ಪದ್ಮಾವತಿ ಅವರು ನೀಡಿದರು.
ಶಾಲಾ ಕಾಲೇಜುಗಳ ಸಂಪರ್ಕವನ್ನು ಎಲ್‌ಟಿಯಾಗಿ ಪರಿವರ್ತಿಸಲು ಗ್ರಾಹಕರೊಬ್ಬರ ಮನವಿಯನ್ನೂ ಪರಿಗಣಿಸುವುದಾಗಿ ಪದ್ಮಾವತಿ ಹೇಳಿದರು.