ವೈದ್ಯಕೀಯ ಶಾಸ್ತ್ರ ತಜ್ಞರ ದಿನಾಚರಣೆ: ಖ್ಯಾತ ವೈದ್ಯರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಮಂಗಳೂರು: ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಜಿಲ್ಲಾ ಶಾಖೆಯ ಆಶ್ರಯದಲ್ಲಿ ವೈದ್ಯಕೀಯ ಶಾಸ್ತ್ರ ತಜ್ಞರ ದಿನಾಚರಣೆ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ನಡೆಯಿತು.
ಶುಕ್ರವಾರ ಸಂಘಧ ಅಧ್ಯಕ್ಷೆ ಡಾ. ಪ್ರಭಾ ಅಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಮೂರು ಖ್ಯಾತ ವೈದ್ಯರಾದ ಡಾ. ದೇವದಾಸ್ ರೈ, ಡಾ. ಇ.ವಿ.ಎಸ್. ಮೆಬನ್, ಡಾ. ಹೆರಾಲ್ಡ್ ಮೆಸ್ಕರೇನಸ್ ಅವರನ್ನು ವೈದ್ಯಕೀಯ ಶಾಸ್ತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ವಿಜೇತರು ಇದು ವೈದ್ಯಕೀಯ ಸೇವೆಗೆ ಸಂದ ಗೌರವ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಡಾ.ಕಿಸ್ಟೋಫರ್ ಪಾಯಸ್, ಡಾ. ಸಿಡ್ನಿ ಡಿಸೋಜಾ, ಡಾ. ಮೋಹನ್ ಪೈ, ಡಾ. ಮುಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಖ್ಯಾತ ನರರೋಗ ಶಾಸ್ತ್ರ ತಜ್ಞ ಹಾಗೂ ಕೆಎಸಿ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಕೆ.ಆರ್. ಶೆಟ್ಟಿ ಸ್ಮರಣಾರ್ಥ ಸಂತಾಪ ಸಭೆ ನಡೆಯಿತು.
ಡಾ.ಐ.ಜಿ. ಭಟ್, ಡಾ. ಜೋ ವರ್ಗೀಸ್, ಡಾ.ಎಂ.ವಿ. ಪ್ರಭು, ಡಾ. ಕೃಷ್ಣ ಮೂರ್ತಿ ಅವರು ಅಗಲಿದ ಡಾ. ಕೆ.ಆರ್. ಶೆಟ್ಟಿ ಅವರ ಸಂಬಂಧ, ಬಾಂಧವ್ಯವನ್ನು ನೆನಪಿಸಿಕೊಂಡು ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಸಂಘದ ಕಾರ್ಯದರ್ಶಿ ಡಾ. ಹಾರೂನ್ ಹುಸೇನ್ ವಂದಿಸಿದರು.