×
Ad

ಪುತ್ತೂರು : ಬಸ್ಸಿನಲ್ಲಿ ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು

Update: 2024-01-20 19:33 IST

ಪುತ್ತೂರು : ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪುತ್ತೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರ ಗಮನವನ್ನು ಬಸ್ಸಿನಲ್ಲಿದ್ದ ಸಹ ಪ್ರಯಾಣಿಕ ಮಹಿಳೆಯೊಬ್ಬರು ಬೇರೆಡೆಗೆ ಸೆಳೆದು ಅವರ ಬ್ಯಾಗಿನಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ನಡೆದಿದೆ.

ಘಟನೆಯ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರು ಕಸಬಾದ ಜಯರಾಮ ಭಟ್ ಪಿ ಚಿನ್ನದ ಸರವನ್ನು ಕಳೆದು ಕೊಂಡವರು. ಜಯರಾಮ ಭಟ್ ಅವರು ಮಂಗಳೂರಿನ ಜ್ಯುವೆಲ್ಲರಿ ಅಂಗಡಿಯೊಂದರಿಂದ 1,60,436 ರೂ. ಮೌಲ್ಯದ ಚಿನ್ನದ ಸರವನ್ನು ಖರೀದಿಸಿ ಅದನ್ನು ತನ್ನ ಬ್ಯಾಗಿನಲ್ಲಿ ಇರಿಸಿಕೊಂಡು ಶುಕ್ರವಾರ ಮಧ್ಯಾಹ್ನ ಮಂಗಳೂರಿನಿಂದ ಪುತ್ತೂರಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊರಟಿದ್ದರು. ಪುತ್ತೂರು ಕಡೆಗೆ ಹೊರಟು ಬಂದ ಬಸ್ ಮಂಗಳೂರಿನ ಬಂಟ್ಸ್ ಹಾಸ್ಟೇಲ್ ತಲುಪಿದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅಪರಿಚಿತ ಮಹಿಳೆಯೊಬ್ಬರು ತನ್ನ ಕೈಯಲ್ಲಿದ್ದ ಚಿಲ್ಲರೆ ಹಣವನ್ನು ಕೆಳಗಡೆ ಬೀಳಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆದಿದ್ದಳು. ಅಲ್ಲದೆ ಜಯರಾಮ ಭಟ್ ಅವರು ಹಿಡಿದುಕೊಂಡಿದ್ದ ಚಿನ್ನದ ಸರವಿದ್ದ ಬ್ಯಾಗಿನ ಮೇಲೆ ಆಕೆ ಮಗುವಿ ನೊಂದಿಗೆ ಬಿದ್ದಿದ್ದಳು. ಬಸ್ ಜ್ಯೋತಿ ಸರ್ಕಲ್ ತಲುಪಿದ ವೇಳೆ ಮಗುವಿದ್ದ ಅಪರಿಚಿತ ಮಹಿಳೆ ಇನ್ನೊಬ್ಬಳು ಮಹಿಳೆಯ ಜತೆ ಬಸ್ಸಿನಿಂದ ಇಳಿದಿದ್ದಳು. ತಾನು ಪುತ್ತೂರಿನ ಮನೆಗೆ ಬಂದು ಬ್ಯಾಗ್ ನೋಡಿದಾಗ ಅದರೊಳಗೆ ಇದ್ದ ಚಿನ್ನದ ಸರವಿದ್ದ ಬಾಕ್ಸ್ ಬ್ಯಾಗ್ ಕಳವಾಗಿರುವುದು ಅರಿವಿಗೆ ಬಂದಿದೆ ಎಂದು ಜಯರಾಮ ಭಟ್ ಅವರು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News