ಅಡಿಕೆಯ ಕಳ್ಳ ಸಾಗಣಿಕೆ ತಡೆಗಟ್ಟಲು ಸರಕಾರಕ್ಕೆ ಕ್ಯಾಂಪ್ಕೊ ಆಗ್ರಹ
ಮಂಗಳೂರು: ಇತ್ತೀಚೆಗೆ ವಿದೇಶಿ ಅಡಿಕೆ ಬೇರೆ ಬೇರೆ ವಿಧಗಳಲ್ಲಿ ಮತ್ತು ಬೇರೆ ಬೇರೆ ಮಾರ್ಗಗಳಲ್ಲಿ ಕಳ್ಳ ಸಾಗಾಣಿಕೆಯ ಮೂಲಕ ದೇಶದೊಳಕ್ಕೆ ಅವ್ಯಾಹತವಾಗಿ ಬರುತ್ತಿದ್ದು, ಸರಕಾರದ ಖಜಾನೆಗೆ ಕನ್ನ ಹಾಕುವ ಕೆಲಸ ನಿರಾತಂಕವಾಗಿ ನಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕ್ಯಾಂಪ್ಕೊ ಸಂಸ್ಥೆಯು ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಇತ್ತೀಚೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮಗ್ರ ಕಾರ್ಗೋ ಟರ್ಮಿನಲ್ ಮೂಲಕ ವಿವಿಧ ಭಾಗಗಳಿಂದ ಆಡಿಕೆ ಮಂಗಳೂರಿಗೆ ಬಂದು, ಇಲ್ಲಿಂದಲೇ ಬೇರೆ ಬೇರೆ ಪ್ರದೇಶಗಳಿಗೆ ರವಾನೆಯಗುತ್ತಿದೆ. ಆಡಿಕೆ ಬೆಳೆಯ ಪಾರಂಪರಿಕ ಕ್ಷೇತ್ರಗಳಾದ ಕರಾವಳಿ ಮತ್ತು ಮಲೆನಾಡಿಗೂ ಕಳ್ಳ ಸಾಗಾಣಿಕೆಯ ಕಬಂದಬಾಹು ಚಾಚಿರುವ ಬಗ್ಗೆ ಕ್ಯಾಂಪ್ಕೊ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಸರಕಾರ ಈ ಬಗ್ಗೆ ಗಮನ ಹರಿಸಿ, ಬರುತ್ತಿರುವ ಆಡಿಕೆ ಬೆಳೆಯ ಮೂಲ, ಅದರ ದರ ಮತ್ತು ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ತೆರಿಗೆ ಪಾವತಿಯಲ್ಲಾಗುವ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.. ಇದರಿಂದ ಆಡಿಕೆಯ ದರ ಸ್ಥಿರೀಕರಣಕ್ಕೆ ಶ್ರಮಿಸುತ್ತಿರುವ ಸಹಕಾರಿ ಸಂಸ್ಥೆಗಳಿಗೆ ಸಹಾಯವಾಗುವುದರ ಮೂಲಕ ಕೃಷಿಕರು ನಿಶ್ಚಿಂತೆಯ ಜೀವನ ನಡೆಸಲು ಸಾಧ್ಯವಾಗುತ್ತದೆ.
ಅಡಿಕೆಯ ಕಾನೂನು ಬಾಹಿರ ಆಮದಿನ ಬಗ್ಗೆ ಕ್ಯಾಂಪ್ಕೊ ಈಗಾಗಲೇ ಕೇಂದ್ರ ಹಣಕಾಸು. ಸಚಿವೆ ನಿರ್ಮಲ ಸೀತಾ ರಾಮನ್, ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಸರಕಾರ ಕೂಡ ರಾಜ್ಯದ ಒಳಗೆ ನಡೆಯುವ ಅಡಿಕೆಯ ಕಾಳಸಂತೆ ದಂಧೆಯನ್ನು ನಿಯಂತ್ರಿಸುವಂತೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಆಗ್ರಹಿಸಿದ್ದಾರೆ.