×
Ad

ಪರ್ಯಾಯ ಮಹೋತ್ಸವಕ್ಕಾಗಿ ತೋಡಿದ ಗುಂಡಿಗಳನ್ನು ಮುಚ್ಚಲು ಆಗ್ರಹ

Update: 2024-02-03 18:34 IST

ಉಡುಪಿ: ಉಡುಪಿ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರವನ್ನು ವಿದ್ಯುತ್ ದೀಪಾಲಂಕಾರ ಮತ್ತು ಕೇಸರಿ ಪತಾಕೆಗಳ ಮಾಲೆಯನ್ನು ಅಳವಡಿಸಲು ತೋಡಿದ ಗುಂಡಿಗಳನ್ನು ಮುಚ್ಚದ ಪರಿಣಾಮ ಹಲವು ಅನಾಹುತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳು ವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಉಡುಪಿ ಪರ್ಯಾಯ ಮಹೋತ್ಸವಕ್ಕಾಗಿ ಉಡುಪಿ ನಗರವನ್ನು ವಿದ್ಯುತ್ ದೀಪಾಲಂಕಾರ ಮತ್ತು ಕೇಸರಿ ಪತಾಕೆಗಳ ಮಾಲೆಯಿಂದ ಸಿಂಗರಿಸಲಾಗಿತ್ತು. ಅಲಂಕಾರಿಕ ವಸ್ತುಗಳ ಜೋಡಿಸಲು ನಗರದ ಪ್ರಮುಖ ರಸ್ತೆಗಳ ಎರಡೂ ಪಾರ್ಶ್ವ ಗಳಲ್ಲಿ ಅಡಿಕೆ ಮರದ ಕಂಬಗಳನ್ನು ಕಾಮಗಾರಿ ಗುತ್ತಿಗೆ ಪಡೆದವರು ಅಳವಡಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಈ ಎಲ್ಲಾ ಕಂಬಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಆದರೆ ಕಂಬ ಅಳವಡಿಸಲು ಅಗೆದಿರುವ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವ ಪರಿಣಾಮವಾಗಿ ನಗರದಲ್ಲಿ ಸಾರ್ವಜನಿಕರು ಅಪಾಯ ಎದುರಿಸ ಬೇಕಾಗಿದೆ. ಈಗಾಗಲೇ ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಗುಂಡಿಗಳಲ್ಲಿ ಕಾಲು ಸಿಲುಕಿ ಬಿದ್ದಿರುವ ಘಟನೆಗಳು ಬಹಳಷ್ಟು ನಡೆದಿವೆ. ಗಾಯಾಳಾಗಿರುವ ಪ್ರಕರಣಗಳು ಸಂಭವಿಸಿವೆ ಎಂದು ದೂರಲಾಗಿದೆ.

ಗುಂಡಿಗಳು ಹಾಗೆಯೇ ಬಿಟ್ಟಲ್ಲಿ ಪ್ರಾಣಾಪಾಯದಂತಹ ಘಟನೆಗಳು ಮುಂದುವರಿಯಲಿದೆ. ಅದಲ್ಲದೆ ಪಾದಚಾರಿ ರಸ್ತೆ ಗಳಲ್ಲಿಯೂ ಗುಂಡಿಗಳನ್ನು ತೋಡಲಾಗಿದ್ದು, ಇಂಟರ್ ಲಾಕ್ ನೆಲಹಾಸುಗಳು ಕಿತ್ತು ಹೋಗಿ ನಗರಸಭೆ ನಡೆಸಿರುವ ಕಾಮಗಾರಿಯು ಹಾಳಾಗಿದೆ. ಹಾಗೆ ಕಿನ್ನಿಮಲ್ಕಿ ಜಂಕ್ಷನ್ ಬಳಿ ಅಶ್ವತ್ಥ ಮರದ ಹತ್ತಿರ ಹೊಸದಾಗಿ ನಿರ್ಮಿಸಿದ ಕಕ್ರಿಟ್ ಚಪ್ಪಡಿ ಮುರಿದು ಅಪಾಯಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಕ್ಷಣ ನಗರಸಭಾ ಅಧಿಕಾರಿಗಳು ಈ ಬದ್ದೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News