ಪಟ್ಟೋರಿ: ಧಾರ್ಮಿಕ ಸಭೆ, ಸರಸ್ವತಿ ಮಂಟಪ ಉದ್ಘಾಟನೆ
ಕೊಣಾಜೆ, ಫೆ.5: ಧಾರ್ಮಿಕ ಕೇಂದ್ರಗಳು ಧಾರ್ಮಿಕ ಕಾರ್ಯಗಳೊಂದಿಗೆ ಸಮಾಜಮುಖಿಯಾಗಿ ಮುನ್ನಡೆದರೆ ಉತ್ತಮ ಸಮಾಜ ರೂಪುಗೊಳ್ಳಬಲ್ಲುದು. ನಮ್ಮ ಧರ್ಮ, ಸಂಸ್ಕೃತಿಯನ್ನು ನಾವು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯಬೇಕು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಹೇಳಿದ್ದಾರೆ.
ಅವರು ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ವತಿಯಿಂದ ಶ್ರೀ ನಾಗಬ್ರಹ್ಮ ಅರಸು ಉಳ್ಳಾಲ್ತಿ ಮಾಡ ಕ್ಷೇತ್ರದಲ್ಲಿ ನಡೆದ ದುರ್ಗಾಪೂಜೆ, ಸರಸ್ವತಿ ಮಂಟಪ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ರಾಜಾರಾಮ್ ಭಟ್, ದೇವಸ್ಥಾನ ಮಂದಿರಗಳು ಕೇವಲ ಪ್ರಾರ್ಥನೆಯ ಸ್ಥಳ ಮಾತ್ರವಲ್ಲ. ಅದು ನಮ್ಮೊಳಗೆ ಧಾರ್ಮಿಕತೆಯೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳಗುವ ಕೇಂದ್ರವೂ ಹೌದು ಎಂದರು.
ಧಾರ್ಮಿಕ ಮುಂದಾಳು ರಮೇಶ್ ರೈ ಕೆಳಗಿನಮನೆ ಮಾತನಾಡಿ, ನಾಗಬ್ರಹ್ಮ ಅರಸು ಉಳ್ಳಾಲ್ತಿ ಮಾಡ ಕ್ಷೇತ್ರವು ಕಾರಣಿಕದ ಕ್ಷೇತ್ರವಾಗಿದ್ದು, ಇಲ್ಲಿಯ ಯುವಕರು ಹಾಗೂ ಭಕ್ತಾಧಿಗಳ ಸಹಕಾರದಿಂದ ಇತ್ತೀಚೆಗೆ ಬ್ರಹ್ಮಕಲಶೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಣಾಜೆ ಬೀಡು ಸತ್ಯನಾರಾಯಣ ಭಟ್, ಪಟ್ಟೋರಿ ಗಡಿ ಪ್ರಧಾನ ತಿಮ್ಮಯ್ಯ ಕೊಂಡೆ, ಮಂಗಳೂರು ಮಂಡಲ ಬಿಜೆಪಿ ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಯುವ ಉದ್ಯಮಿ ಶ್ರೀನಾಥ್ ಕೊಂಡೆ ಚಕ್ರಕೋಡಿ, ಬಗಂಬಿಲ ವೈದ್ಯನಾಥೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷ ಪುರುಷೋತ್ತಮ ಅಂಚನ್, ಧಾರ್ಮಿಕ ಮುಂದಾಳು ನಾಗವೇಣಿ ಶೆಟ್ಟಿ ಅಸೈಗೋಳಿ, ನಾಗಬ್ರಹ್ಮ ಭಜನಾ ಮಂಡಳಿ ಪಟ್ಟೋರಿ ಇದರ ಅಧ್ಯಕ್ಷ ಕೃಷ್ಣಪ್ಪ ಕೆ.ಕೆ.ಎಸ್. ಮೊದಲಾದವರು ಉಪಸ್ಥಿತರಿದ್ದರು.
ನಾಗಬ್ರಹ್ಮ ಭಜನಾ ಮಂಡಳಿಯ ರಾಮಕೃಷ್ಣ ಪಟ್ಟೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಜನಾ ಮಂಡಳಿಯ ಕಾರ್ಯದರ್ಶಿ ರಾಜೇಶ್ ಕಾನ ಸ್ವಾಗತಿಸಿದರು. ರವಿ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.