×
Ad

‘ಗ್ರೀನ್ ಹೈಡ್ರೋಜನ್’ಗೆ ರಾಜ್ಯದಲ್ಲಿ ಹೊಸ ನೀತಿ: ಕೆ.ಜೆ. ಜಾರ್ಜ್

Update: 2024-02-05 17:48 IST

ಮಂಗಳೂರು: ಸಾಂಪ್ರದಾಯಿಕ ಇಂಧನ ಮೂಲಗಳ ಅವಲಂಬನೆಯ ಬದಲಿಗೆ ನವೀಕರಿಸಬಹುದಾದ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಕರ್ನಾಟಕ ಅತ್ಯುತ್ತಮ ನೆಲೆಯಾಗಿದ್ದು, ಇದರ ಬಳಕೆ ಸಾಧ್ಯತೆಯ ಕುರಿತಂ ಹೊಸ ನೀತಿಯನ್ನು ರೂಪಿಸಲಾಗುವುದು ಹಾಗೂ ಪೈಲಟ್ ಪ್ರಾಜೆಕ್ಟ್‌ಗಾಗಿ ಮಂಗಳೂರನ್ನು ಆಯ್ಕೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಬಿಜೈನ ಮೆಸ್ಕಾಂ ಭವನದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.

ರಾಜಸ್ತಾನ ಹಾಗೂ ಗುಜರಾತ್‌ನಲ್ಲಿ ಗ್ರೀನ್ ಹೈಡ್ರೋಜನ್ ಯೋಜನೆ ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಇದಕ್ಕೆ ಪೂರಕ ವಾದ ನೀತಿ(ಪಾಲಿಸಿ) ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸಲಾಗಿದೆ. ಈ ಹಿಂದೆ ಪಾವಗಡದಲ್ಲಿ ಪೈಲಟ್ ಯೋಜನೆಗೆ ಚಿಂತಿಸಲಾಗಿತ್ತು. ಆದರೆ ಮಂಗಳೂರಿನಲ್ಲಿ ಅದಕ್ಕೆ ಸೂಕ್ತವಾದ ಸಮುದ್ರ, ಬಂದರು ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ಪೈಲಟ್ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತ. ಇದಕ್ಕೆ ದೊಡ್ಡ ಕೈಗಾರಿಕೆಗಳು ಮುಂದೆ ಬರಬೇಕಾಗಿದೆ. ಜಾಗತಿಕ ಹೂಡಿಕಾ ಸಮಾವೇಶದಲ್ಲೂ ಬಹಳಷ್ಟು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫಾರಂನಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಇದಕ್ಕಾಗಿ ಮುಂದೆ ಬರುವ ಕೈಗಾರಿಕೆಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. 300 ಕೆ.ವಿ. ಸಾಮರ್ಥ್ಯದಲ್ಲಿ ಪೈಲಟ್ ಪ್ರಾಜೆಕ್ಟ್‌ಗೆ ಚಿಂತಿಸಲಾಗಿದೆ. ಪ್ರಸಕ್ತ ಈ ಬಗೆಗಿನ ಪ್ರಕ್ರಿಯೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ಕೆ.ಜೆ. ಜಾರ್ಜ್ ಹೇಳಿದರು. ರಾಜ್ಯದಲ್ಲಿ ಪ್ರಥಮ ಹಂತದಲ್ಲಿ 3 ಸಾವಿರ ಲೈನ್‌ಮೆನ್‌ಗಳ ನೇಮಕ

ರಾಜ್ಯದಲ್ಲಿ ಒಟ್ಟು 6000 ಲೈನ್‌ಮೆನ್‌ಗಳ ಅಗತ್ಯವಿದ್ದು, ತಕ್ಷಣವೇ ಪ್ರಥಮ ಹಂತದಲ್ಲಿ 3000 ಮಂದಿಯ ನೇಮಕಾತಿಗೆ ಕ್ರಮ ವಹಿಲಾಗಿದೆ ಎಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ದ.ಕ.ಜಿಲ್ಲೆಯಲ್ಲಿ ಲೈನ್ ಮೆನ್‌ಗಳು ಹೊರ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುತ್ತಿರುವುದರಿಂದ ಅವರು ನಿಗ ದಿತ ಅವಧಿಯ ಬಳಿಕ ತಮ್ಮ ಊರುಗಳಿಗೆ ಜನಪ್ರತಿನಿಧಿಗಳ ಶಿಫಾರಸಿನೊಂದಿಗೆ ವರ್ಗಾವಣೆಯಾಗುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಲೈನ್‌ಮೆನ್‌ಗಳ ಕೊರತೆ ಶೇ. ೬೦ರಷ್ಟಿದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಸ್ಥಳೀಯರಿಗೆ ಮೆಸ್ಕಾಂ ಸಹಕಾರದಲ್ಲಿ ತರಬೇತಿ ನೀಡಲು ತಾವು ಸಿದ್ಧ ಎಂದು ಸಭೆಯ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಇಂಧನ ಸಚಿವರ ಗಮನ ಸೆಳೆದರು.

ಸ್ಥಳೀಯರ ಆಯ್ಕೆಗೆ ಪೂರಕವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇಮಕಾತಿ ಏಕಕಾಲದಲ್ಲಿ ನಡೆಸಲು ಈ ಬಾರಿ ನಿರ್ಧರಿಸ ಲಾಗಿದೆ. ಇದರಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಲು ಅವಕಾಶ ಸಿಗಲಿದೆ. ಮೆಸ್ಕಾಂ ಮೂಲಕ ಕೌಶಲ್ಯ ತರಬೇತಿಯನ್ನು ನಡೆಸಲು ಸೂಚಿಸಲಾಗುವುದು ಎಂದು ಸಚಿವ ಜಾರ್ಜ್ ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ಬಿ.ಎಂ. ಫಾರೂಕ್, ಮಾಜಿ ಶಾಸಕ ಜೆ.ಆರ್. ಲೋಬೋ, ಕೆಪಿಟಿಸಿಎಲ್‌ನ ಎಂಡಿ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂ ಎಂಡಿ ಪದ್ಮಾವತಿ, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News