×
Ad

ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ಸಮಗ್ರ ಕ್ರಮ: ಸಚಿವ ಕೆ.ಜೆ. ಜಾರ್ಜ್

Update: 2024-02-05 17:58 IST

ಮಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗತ್ಯವಿದ್ದಲ್ಲಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಬಿಜೈನ ಮೆಸ್ಕಾಂ ಭವನದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ನಾಲ್ಕೈದು ವರ್ಷಗಳಲ್ಲಿ ವಿದ್ಯುತ್ ಖರೀದಿ ಒಪ್ಪಂದವನ್ನು ರಾಜ್ಯದಲ್ಲಿ ಮಾಡದ ಕಾರಣ ಈ ಬಾರಿ ಮಳೆಗಾಲದಲ್ಲಿ ಮಳೆಯೂ ಕೈಕೊಟ್ಟು ನೀರಿನ ಕೊರತೆಯಿಂದ ಸಮಸ್ಯೆ ಆಗಿತ್ತು. ಖಾಸಗಿಯವರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿದ್ದರೂ ಅದನ್ನು ಖರೀದಿಗೆ ವ್ಯವಸ್ಥೆ ಮಾಡಿರಲಿಲ್ಲ. ಕೋವಿಡ್ ಕಾರಣದಿಂದ ಅದು ಆಗಿರಲಿಲ್ಲ. ಸೋಲಾರ್ ವ್ಯವಸ್ಥೆಗೆ ಮೋಡದ ಸಮಸ್ಯೆಯಾಗಿತ್ತು. ವಿಂಡ್ ಪವರ್ ಬಳಕೆಗೆ ಗಾಳಿಯ ಕೊರತೆಯಾಗಿತ್ತು. ಇದರಿಂದಾಗಿ 8900 ಮೆಗಾವ್ಯಾಟ್ ಇದ್ದ ಬೇಡಿಕೆ 16000 ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು. ಇದರಿಂದ ಕೊರತೆ ಎದುರಾಯಿತು. ಆ ಸಂದರ್ಭ ಮುಖ್ಯಮಂತ್ರಿಯವರು ತುರ್ತು ಸಭೆ ಕರೆದು ಒಂದು ತಿಂಗಳ ಅವಧಿಗೆ 7 ಗಂಟೆಯ ವಿದ್ಯುತ್ ಪೂರೈಕೆಯನ್ನು ರೈತರಿಗೆ 5 ಗಂಟೆಗೆ ಸೀಮಿತಗೊಳಿಸಲಾಗಿತ್ತು. ಆ ಸಂದರ್ಭದಲ್ಲಿಯೂ ರೈತರಿಗೆ ತೊಂದರೆ ಆಗದಂತೆ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಪಂಜಾಜ್ ರಾಜ್ಯಗಳಿಂದ ವಿನಿಮಯ ವ್ಯವಸ್ಥೆಯಡಿ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಗೆ ಕ್ರಮ ವಹಿಸಲಾಯಿತು. ಕೇಂದ್ರ ಸಚಿವರೂ ಸ್ಪಂದನೆ ನೀಡಿದ್ದರು. ಈ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದನೆಗೆ ಗುಣಮಟ್ಟದ ಸಮಸ್ಯೆ ಎದುರಾದ ಕಾರಣ ಇದೀಗ ಬೇರೆ ರಾಜ್ಯಗಳಿಂದ ಗುಣಮಟ್ಟದ ಕಲ್ಲಿದಲು ಆಮದಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಗ್ಯಾಸ್ ಸ್ಥಾವರ ಪುನರಾರಂಭಗೊಂಡಿದೆ. ಅಲ್ಲಿಯೂ ಎರಡು ತಿಂಗಳಲ್ಲಿ 380 ಮೆಗಾ ವ್ಯಾಟ್ ಉತ್ಪಾದನೆಯಾಗಲಿದೆ. ಶರಾವತಿ ಮತ್ತು ವರಾಹಿ ಯೋಜನೆಗಳ ಮೂಲಕವೂ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ವರಾಹಿಯಲ್ಲಿ 450 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಅಲ್ಲಿ ಪಂಪ್ ಸ್ಟೋರೇಜ್ ಮಾಡಿದರೆ 1500 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ದೊರೆಯಲಿದೆ. ಚೆಕ್‌ಡ್ಯಾಂ ಮಾಡಿ 0.32 ಟಿಎಂಸಿ ನೀರು (ಎರಡು ದಿನಗಳ ಮಳೆ ನೀರು) ಸಂಗ್ರಹಿಸಿ ವಿದ್ಯುತ್ ಉತ್ಪಾದ ನೆಗೆ ಕ್ರಮ ವಹಿಸಲಾಗುವುದು. ವರಾಹಿ ಯೋಜನೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ರೈತರ ಪಂಪ್‌ಸೆಟ್‌ಗಳನ್ನು ಸೋಲಾರೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕುಸುಮ್- ಬಿ ಮತ್ತು ಕುಸುಮ್ ಸಿ ಎಂಬ 6000 ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕುಸುಮ್ ಸಿ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 800 ಸಬ್‌ಸ್ಟೇಷನ್‌ಗಳನ್ನು ಗುರುತಿಸಲಾಗಿದೆ. ಈ ಸಬ್‌ಸ್ಟೇಷನ್‌ಗಳ ಬಳಿ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಲಾ ಗುತ್ತದೆ. ಗುತ್ತಿಗೆದಾರರು ಭೂಮಿ ಬಳಕೆಗೆ ನಿಗದಿತ ಶುಲ್ಕ ನೀಡಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಿ ಸಬ್‌ಸ್ಟೇಷನ್‌ಗಳಿಗೆ ಪೂರೈಕೆ ಮಾಡಬೇಕಿದೆ. ಕುಸುಮ್ ಬಿ ಯೋಜನೆಯಡಿ ಸೋಲಾರ್ ಅಳವಡಿಕೆಗೆ ಮುಂದಾಗುವ ರೈತರಿಗೆ ಕೇಂದ್ರದ ಶೇ. 30 ಹಾಗೂ ರಾಜ್ಯದ ಶೇ. 50 ಸಬ್ಸಿಡಿಯೊಂದಿಗೆ ವ್ಯವಸ್ಥೆ ಮಾಡಲಾಗುವುದು. ಮೆಸ್ಕಾಂ ಮತ್ತು ಎಸ್ಕಾಂಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಒಟ್ಟು ಈ ಮೂಲಕ 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

33/11 ಕೆವಿ ಶಿರ್ತಾಡಿ ಉಪ ಕೇಂದ್ರದ ಕಾಮಗಾರಿ ಶೇ. 50ರಷ್ಟು ಆಗಿದ್ದು, ಮೂರು ತಿಂಗಳಲ್ಲಿ ಹಾಗೂ ಕೋಟೆಕಾರ್‌ನ ಉಪಕೇಂದ್ರದ ಕಾಮಗಾರಿಯನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.

ಮಂಗಳೂರು ನಗರದಲ್ಲಿ ವಿದ್ಯುತ್ ಸಂಪರ್ಕಕ್ಕೆ ನಿಗದಿತ ಭೂಗತ ಕೇಬಲ್ ವ್ಯವಸ್ಥೆಯನ್ನು ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸಲಹೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಅವರು, ನಾರಾಯಣಗುರು ವೃತ್ತದಿಂದ ಗೋಕರ್ಣನಾಥ ಕ್ಷೇತ್ರವದವರೆಗಿನ ಸುಮಾರು 4 ಕಿ.ಮೀ. ವ್ಯಾಪ್ತಿಯ ದಸರಾ ಮೆರವಣಿಗೆ ಪ್ರದೇಶದಲ್ಲಿ ಭೂಗತ ಕೇಬಲ್ ಅಳವಡಿಸಲು ಕ್ರಮ ವಹಿಸಬೇಕು ಹಾಗೂ ಉರ್ವಾಸ್ಟೋರ್‌ನ ಗಣಪತಿ ದೇವಸ್ಥಾನಕ್ಕೆ ಹೊಸ ರಥ ವ್ಯವಸ್ಥೆಯಾಗಿದ್ದು, ಅಲ್ಲಿ ರಥೋತ್ಸವ ನಡೆಸಲು ಪೂರಕವಾಗಿ ಆ ಪ್ರದೇಶದಲ್ಲಿ ಸುಮಾರು 1.6 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಭೂಗತಗೊಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ದಸರಾ ವ್ಯಾಪ್ತಿಯ ಪ್ರದೇಶದಲ್ಲಿ ಭೂಗತಗೊಳಿಸಲು ಅಧಿಕ ಮೊತ್ತ ಬೇಕಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಉರ್ವಾಸ್ಟೋರ್ ಪ್ರದೇಶದಲ್ಲಿ ಶೀಘ್ರದಲ್ಲೇ ವ್ಯವಸ್ಥೆ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು ಎಂದು ಪಾಲಿಕೆ ಸದಸ್ಯ ನವೀನ್ ಡಿಸೋಜಾ ಒತ್ತಾಯಿಸಿದರು.

ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಡೆ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್‌ಕಟೀಲು, ಶಾಸಕ ಹರೀಶ್‌ಪೂಂಜಾ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಅವರು ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೂ ಲಿಖಿತ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಪರಿಗಣಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಸಭೆಯಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ಉಪಾಧ್ಯಕ್ಷ ಅಜಿತ್ ಕುಮಾರ್, ಕೆಸಿಸಿಐನ ಪ್ರತಿನಿಧಿಯಾಗಿ ಬಿ.ಎ. ನಝೀರ್ ಮೊದಲಾದವರು ಹಲವು ಬೇಡಿಕೆಗಳನ್ನು ಸಲ್ಲಿಸಿದರು.

ಮೆಸ್ಕಾಂ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಜನರ ಸಮಸ್ಯೆಗಳನ್ನು ಅರಿತುಕೊಂಡು ಸೂಕ್ತ ರೀತಿಯಲ್ಲಿ ಪರಿಹರಿಸಲು ಕ್ರಮ ವಹಿಸಬೇಕು. ಸರಕಾರದ ಗೃಹಜ್ಯೋತಿಯನ್ನು ಇಂಜಿನಿಯರ್‌ಗಳು ಅತ್ಯಂತ ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಒಟ್ಟು 656374 ಗೃಹ ಬಳಕೆಯ ವಿದ್ಯುತ್ ಗ್ರಾಹಕರಿದ್ದು, ಅವರಲ್ಲಿ 524907 ಮಂದಿ ಗೃಹಜ್ಯೋತಿ ಯೋನಜೆಯ ಫಲಾನುಭವಿಗಳಾಗಿದ್ದಾರೆ. ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಗೃಹಜ್ಯೋತಿಗೆ ಒಟ್ಟು 166.04 ಕೋಟಿ ರೂ. ಸಬ್ಸಿಡಿ ವ್ಯಯಿಸಲಾಗಿದೆ ಎಂದು ಮೆಸ್ಕಾಂ ಎಂಡಿ ಪದ್ಮಾವತಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News