×
Ad

ಕುಕ್ಕೆ ಸುಬ್ರಹ್ಮಣ್ಯ: ಅರಣ್ಯ ಸಚಿವರಿಂದ ವಿವಿಧೆಡೆ ಪರಿಸರ ಸ್ನೇಹಿ ಟೂರಿಸಂ ಯೋಜನೆಗೆ ನಿರ್ದೇಶನ

Update: 2024-02-05 22:38 IST

ಸುಳ್ಯ: ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಅರಣ್ಯ ಇಲಾಖೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರದ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಭೇಟಿ ನೀಡಿದ ಸಚಿವರಿಗೆ ಅರಣ್ಯ ಇಲಾಖೆ ವತಿಯಿಂದ ಅರಣ್ಯಕ್ಕೆ ಬೀಳುವ ಬೆಂಕಿ ನಂದಿಸುವ ಬಗೆಗಿನ ಮುಂಜಾಗ್ರತಾ ಕ್ರಮ ಹಾಗೂ ಬೆಂಕಿ ನಂದಿಸಲು ಕೈಗೊಂಡ ಕ್ರಮ ಹಾಗೂ ಬೆಂಕಿ ನಂದಿಸುವ ಬಗೆಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಬಳಿಕ ಅಗ್ನಿಶಾಮಕ ದಳದ ವತಿಯಿಂದಲೂ ಬೆಂಕಿ ನಂದಿಸುವ ಬಗೆಗೆ ವಿವಿಧ ಮಾದರಿಯ ಕಾರ್ಯಚಾರಣೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸಚಿವರು ಅಧಿಕಾರಿಗಳ ಜೊತೆ ಈ ವೇಳೆ ಚರ್ಚಿಸಿ ಪೂರಕ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು.

ಕುಮಾರಪರ್ವತ ಪ್ರವೇಶ ದ್ವಾರಕ್ಕೆ ಭೇಟಿ

ಕುಮಾರ ಪರ್ವತ ಚಾರಣ ಕೈಗೊಳ್ಳುವ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆಯ ಕುಮಾರಪರ್ವತ ಪ್ರವೇಶ ದ್ವಾರದ ಅರಣ್ಯ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು. ಅಲ್ಲಿ ಕೆಲ ದಿನಗಳ ಹಿಂದೆ ಚಾರಣಕ್ಕೆ ಸಂಬಂಧಿಸಿದಂತೆ ಉಂಟಾದ ದಟ್ಟನೆ ಬಗ್ಗೆ ಮಾಹಿತಿ ಪಡೆದು ಕಾರಣಗಳನ್ನು ಅಧಿಕಾರಿಗಳಿಂದ ಪಡೆದರು. ಬಳಿಕ ಚೆಕ್ ಪೋಸ್ಟ್ ಹಾಗೂ ಪರಿಸರವನ್ನು ಸಚಿವರು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಪರಿಸರ ಸ್ನೇಹಿ ಚಾರಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕುಮಾರಪರ್ವತ ಸೇರಿದಂತೆ ಚಾರಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಮುಂದಿನ ಅವಧಿಯಿಂದ ಕುಮಾರಪರ್ವತ ಚಾರಣ ಕೈಗೊಳ್ಳಲು ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಚಾರಣ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಗಮನ ಹರಿಸಬೇಕು. ಈ ಬಗ್ಗೆ ಸಿಬ್ಬಂದಿಗಳಿಂದ ವರದಿ ಪಡೆಯಬೇಕು. ಚಾರಣಕ್ಕೆ ದಟ್ಟಣೆ ಉಂಟಾಗದ ರೀತಿಯಲ್ಲಿ ನಿಗಧಿತ ಸಂಖ್ಯೆಗೆ ಸೀಮಿತಗೊಳಿಸಲು ಕ್ರಮಕೈಗೊಳ್ಳುವಂತೆಯೂ ನಿರ್ದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News