ಮನಪಾ ಸುರತ್ಕಲ್ ವಲಯ ಕಚೇರಿಯಲ್ಲಿ ಜನಸ್ಪಂದನಾ ಸಭೆ
ಸುರತ್ಕಲ್ : ಕುಡಿಯುವ ನೀರು, ರಸ್ತೆ, ಎಂಆರ್ಪಿಎಲ್, ಎಚ್ಪಿಸಿಎಲ್ ಗೆ ಕುಡಿಯುವ ನೀರು ಅಕ್ರಮ ಸರಬರಾಜಿನ ಕುರಿತು ಮನಪಾ ಮೇಯರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದೂರುಗಳು ಕೇಳಿ ಬಂದವು.
ಮೇಯರ್ ಸುದೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮನಪಾ ಸುರತ್ಕಲ್ ವಲಯ ಕಚೇರಿಯಲ್ಲಿ ಜನಸ್ಪಂದನಾ ಸಭೆ ನಡೆಯಿತು.
ಕೈಗಾರಿಕೆಗಳು ಕುಡಿಯುವ ನೀರನ್ನು ಉದ್ದಿಮೆಗಳಿಗೆ ಬಳಸುವಂತಿಲ್ಲ. ಅವರಿಗಾಗಿ ಡ್ಯಾಮ್ ಗಳನ್ನು ಮಾಡಿಕೊಡಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟಗೊಂಡ ಬಳಿಕವೂ ನೀರು ಸರಬರಾಜು ನಡೆಯುತ್ತಲೇ ಇದೆ. ಪ್ರತೀ ದಿನ ಸುಮಾರು 50 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲಾಗುತ್ತದೆ. ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಅಕ್ರಮ ನೀರು ಸರಬರಾಜು ಮಾಡುತ್ತಿರುವವರ ಮೇಲೆ ಕ್ರಮ ವಹಿಸಬೇಕು. ಮತ್ತು ನಿಗಾ ಇಡಬೇಕೆಂದು ಸಾಮಾಜಿಕ ಹೋರಾಟಗಾರ ಬಿ.ಕೆ. ಇಮ್ತಿಯಾಝ್ ದೂರಿದರು.
ಇದಕ್ಕೆ ಉತ್ತರಿಸಿದ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು ಅವರು, ವ್ಯಾಪಾರ ಮಾಡುವವರಿಗೆ ನಾವು ಹೇಳಲಾಗುವುದಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೆ ಕ್ರಮಕೈಗೊಳ್ಳಲಾಗುವುದು. ಲಿಖಿತ ದೂರು ನೀಡುವಂತೆ ಸೂಚಿಸಿದರು.
ಕೊರೋನ ಬಳಿಕ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದೆ. ಸಂತೆವ್ಯಾಪಾರಕ್ಕೆ ಟೆಂಡರ್ ಕರೆಯಲಾಗಿಲ್ಲ. ಟೆಂಡರ್ ಕರೆದು ಅವಕಾಶ ನೀಡಿದರೆ ಮನಪಾಕ್ಕೂ ಆದಾಯ ಬರಲಿದೆ. ಕೊರೋನ ಬಳಿಕ ಎರಡು ಸಂತೆಗಳನ್ನು ಒಂದಾಗಿ ಮಾಡಲಾಗಿದೆ. ಅದನ್ನು ಬುಧವಾರ ಮತ್ತು ರವಿವಾರವೂ ನಡೆಸಬೇಕು. ಈಗ ಎರಡೂ ಬದಿಯಲ್ಲಿ ಸಂತೆ ನಡೆಯುವು ದರಿಂದ ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ಅಡತಡಯುಂಟಾಗುತ್ತಿದ್ದು, ಒಂದೆ ಭಾಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮೇಯರ್ ಸ್ಪಂದಿಸುವ ಭರವಸೆ ನೀಡಿದರು.
ಚೊಕ್ಕಬೆಟ್ಟು ನಿವಾಸಿಯೊಬ್ಬರು ಮಾತನಾಡಿ, ನಮ್ಮ ಮನೆಯ ಬಳಿ ಅನದೀಕೃತ ಹೋಮ್ ಸ್ಟೇ ಇದ್ದು, ಇದರಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಶೀಘ್ರ ಸೂಕ್ತ ಕ್ರಮ ವಹಿಸುವಂತೆ ನಿವೇದಿಸಿಕೊಂಡರು. ಇದಕ್ಕೆ ಉತ್ತರಿಸಿದ ಮೇಯರ್ ಅವರು, ಅಂತಹಾ ಸಂದರ್ಭದಲ್ಲಿ 112ಗೆ ಕರೆ ಮಾಡುವಂತೆ ಸೂಚಿಸಿದರು. ತಾನೂ ಪೊಲೀಸ್ ಆಯುಕ್ತರಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ನುಡಿದರು.
ಸಭೆಯಲ್ಲಿದ್ದ ತಡಂಬೈಲ್ ನಿವಾಸಿಗಳು ಊರಿನ ಯಾವುದೇ ರಸ್ತೆಗಳು ದುರಸ್ತಿಯಾಗಿಲ್ಲ. ಕಳೆದ ಹಲವು ವರ್ಷಗಳಿಂದ ದೂರು ನೀಡುತ್ತಾ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಸಮಜಾಹಿಷಿ ನೀಡಲು ಮುಂದಾದ ಮನಪಾ ಸದಸ್ಯೆ ಶ್ವೇತಾ ಪೂಜಾರಿ ಅವರನ್ನು ತರಾಟೆಗೆ ತೆಗೆದು ಕೊಂಡರು. ನಾವು ಎಲ್ಲರಂತೆ ತೆರಿಗೆ ಕಟ್ಟುತ್ತೇವೆ. ಆದರೂ ನಮ್ಮ ಊರಿನ ಅಭಿವೃದ್ಧಿ ಯಾಕೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಗ್ರಾಮಸ್ಥರನ್ನು ಸಮಾಧಾನಿಸಿ ಮಾತನಾಡಿದ ಮೇಯರ್ ಅವರು, ಮುಂದಿನ 15 ದಿನಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಮಾಧಾನಿಸಿದರು.
ಮತ್ತೋರ್ವ ಕೃಷ್ಣಾಪುರ ನಿವಾಸಿ, ಮನೆ ಸಂಮೀಪ ಕೋಳಿಯ ವಾಸನೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅನ್ಯಾಯದ ಪರವಾಗಿದ್ದ ಅಧಿಕಾರಿಕಾರಿಗಳು ಈಗ ಕೋಳಿ ವ್ಯಾಪಾರಿಗಳ ಪರವಾಗಿದ್ದಾರೆ ಎಂದು ಸಭೆಯಲ್ಲಿ ನೇರ ಆರೋಪ ಮಾಡಿದರು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ಕಂದಾಯ ಇಲಾಖೆಯ ಉಪ ಆಯುಕ್ತರಾದ ಗಿರೀಶ್ ಸಂದನ್, ಎಲ್ಲಾ ವಾರ್ಡ್ ಗಳ ಕಮನಪಾ ಸದಸ್ಯರು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.