ಮಂಗಳೂರು: ಕೇಂದ್ರ ಸರಕಾರದಿಂದ ಕರ್ನಾಟಕ-ಕೇರಳಕ್ಕೆ ಅನ್ಯಾಯದ ವಿರುದ್ಧ ಪ್ರತಿಭಟನೆ
ಮಂಗಳೂರು, ಫೆ.8: ಕೇಂದ್ರ ಸರಕಾರವು ಕರ್ನಾಟಕ ಮತ್ತು ಕೇರಳದ ವಿರುದ್ಧ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಗುರುವಾರ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿತು.
ಕರ್ನಾಟಕ ಮತ್ತು ಕೇರಳ ಸರಕಾರವು ಸಂವಿಧಾನಬದ್ಧ ಹಕ್ಕುಗಳನ್ನು ಕೇಳುತ್ತಿದೆ. ಅದಕ್ಕಾಗಿ ದಿಲ್ಲಿಯಲ್ಲಿ ಪ್ರತಿಭಟನೆಯನ್ನು ನಡೆಸಿದೆ. ಈ ಎರಡೂ ಸರಕಾರದ ಹೋರಾಟದ ಪರ ಸಿಪಿಎಂ ಸೌಹಾರ್ದ ಬೆಂಬಲ ನೀಡುವ ಅಗತ್ಯವಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರವು ಸರ್ವಾಧಿಕಾರಿ ನೀತಿ ತೋರುತ್ತಿವೆ. ತೆರಿಗೆಯ ಪಾಲನ್ನು ಸರಿಯಾಗಿ ಹಂಚಿಕೆ ಮಾಡದೆ ದಮನಿಸಲು ಮುಂದಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಆರೋಪಿಸಿದರು.
ಸಿಪಿಎಂ ನಾಯಕರಾದ ವಸಂತ ಆಚಾರಿ, ಸುಕುಮಾರ್ ತೊಕ್ಕೊಟ್ಟು ಮಾತನಾಡಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಿ.ಕೆ. ಇಮ್ತಿಯಾಝ್, ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ ಮತ್ತಿತರರು ಪಾಲ್ಗೊಂಡಿದ್ದರು.
ಮನೋಜ್ ವಾಮಂಜೂರು ಸ್ವಾಗತಿಸಿದರು. ಸದಾಶಿವ ದಾಸ್ ವಂದಿಸಿದರು.