×
Ad

ಮಂಗಳೂರು: ಪೂರೈಕೆಯಾಗದ ನೀರು; ಸಮಸ್ಯೆಯಲ್ಲಿ ನಾಗರಿಕರು

Update: 2024-02-08 21:15 IST

ಮಂಗಳೂರು, ಫೆ.8: ನೀರಿನ ಪೈಪ್‌ಲೈನ್‌ಗೆ ಆದ ಹಾನಿಯಿಂದ ಗುರುವಾರವೂ ನಗರದಲ್ಲಿ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಇದರಿಂದ ನಗರದ ಹಲವೆಡೆ ನಾಗರಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ನೀರಿನ ಪೈಪ್‌ಲೈನ್‌ಗೆ ಹಾನಿಯಾದ ಕಾರಣ ಮಂಗಳವಾರದಿಂದ ನಗರದ ಹಲವು ಭಾಗಗಳಿಗೆ ನೀರು ಸರಬರಾಜು ಸ್ಥಗಿತವಾಗಿತ್ತು. ಪೈಪ್‌ಲೈನ್‌ನ ದುರಸ್ತಿ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದರೂ ಸತತ ಮೂರು ದಿನದಿಂದ ನಗರದ ಬಹುತೇಕ ಕಡೆ ನೀರು ಲಭ್ಯವಾಗಲಿಲ್ಲ. ವಸತಿ ಸಮುಚ್ಚಯಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗಿದೆ ಎನ್ನಲಾಗಿದೆ.

ನಗರದ ಬಂದರು, ಕೊಡಿಯಾಲಬೈಲು, ಕದ್ರಿ, ಪಿವಿಎಸ್, ಲೇಡಿಹಿಲ್, ಜಲ್ಲಿಗುಡ್ಡೆ, ಕೋಡಿಕಲ್, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ನಾಗುರಿ, ಕೂಳೂರು, ಪಣಂಬೂರು ಸುರತ್ಕಲ್, ಕಾಟಿಪಳ್ಳ, ಕಾನ, ಕುಳಾಯಿ, ಮುಕ್ಕ ಮತ್ತಿತರ ಪ್ರದೇಶಗಳಲ್ಲಿ ಜನರು ನೀರಿನ ಸಮಸ್ಯೆ ಎದುರಿಸುವಂತಾಯಿತು.

ಹಾನಿಯಾಗಿರುವ ನೀರಿನ ಪೈಪ್‌ಲೈನ್‌ನ ದುರಸ್ತಿ ಕಾಮಗಾರಿಯು ಗುರುವಾರವೂ ಮುಂದುವರಿದಿದ್ದು, ಶುಕ್ರವಾರದಿಂದ ನೀರು ಸರಬರಾಜು ಮತ್ತೆ ಆರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ತುಂಬೆ ಡ್ಯಾಂನಿಂದ ಬೆಂದೂರ್‌ವೆಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಪ್ರಮುಖ 1 ಮೀ. ಅಗಲ ವ್ಯಾಸದ ಪೈಪ್‌ಗೆ ನಾಗುರಿ ಸಮೀಪದಲ್ಲಿ ಹಾನಿಯಾಗಿತ್ತು. ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸಂದರ್ಭ ಪೈಪ್‌ಗೆ ಹಾನಿಯಾಗಿದೆ ಎನ್ನಲಾಗಿದೆ. ತುಂಬೆಯಲ್ಲಿ ದುರಸ್ತಿ ಕಾಮಗಾರಿಗಾಗಿ ಮಂಗಳವಾರ ಬೆಳಗ್ಗಿನಿಂದ ನೀರು ಪಂಪಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಕಾಮಗಾರಿ ಮುಗಿದ ಬಳಿಕ ಮಂಗಳವಾರ ಮಧ್ಯರಾತ್ರಿ 12:30ರ ವೇಳೆಗೆ ತುಂಬೆಯಿಂದ ನೀರು ಪಂಪಿಂಗ್ ಶುರು ಮಾಡಲಾಗಿತ್ತು. ಆದರೆ ನೀರು ಬೆಂದೂರ್‌ವೆಲ್ ಪಂಪ್‌ಹೌಸ್‌ಗೆ ಕೊಂಚ ಬಂದು ಬಳಿಕ ಸಂಪೂರ್ಣ ನಿಂತಿತ್ತು. ಪರಿಶೀಲಿಸಿದಾಗ ನಾಗುರಿ ಬಳಿ ಪೈಪ್‌ಗೆ ಹಾನಿಯಾಗಿ ನೀರು ವ್ಯರ್ಥವಾಗುತ್ತಿರುವುದು ಕಂಡು ಬಂದಿದೆ. ಮುಂಜಾನೆ 3:30ಕ್ಕೆ ತುಂಬೆಯಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News