ಹರೇಕಳ ಡಿವೈಎಫ್ಐ ನವೀಕೃತ ಕಚೇರಿಯ ವಾರ್ಷಿಕೋತ್ಸವ, ರಾಜ್ಯ ಸಮ್ಮೇಳನ ಸಮಾಲೋಚನಾ ಸಭೆ
ಕೊಣಾಜೆ: 'ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ' ಧ್ಯೇಯದೊಂದಿಗೆ ಉಳ್ಳಾಲದಲ್ಲಿ ರಾಜ್ಯ ಸಮ್ಮೇಳನ ನಡೆಯು ತ್ತಿದ್ದು ಯಶಸ್ಸುಗೊಳಿಸುವ ಜವಾಬ್ದಾರಿ ತಾಲೂಕಿನ ಜನರ ಮೇಲಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದರು.
ಹರೇಕಳ ಡಿವೈಎಫ್ಐ ನವೀಕೃತ ಕಚೇರಿಯ ವಾರ್ಷಿಕೋತ್ಸವ ಹಾಗೂ ರಾಜ್ಯ ಸಮ್ಮೇಳನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಉಳ್ಳಾಲದಲ್ಲಿ ಸರ್ಕಾರಿ ಪದವಿ ಕಾಲೇಜು, ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಇಲ್ಲದ ಕಾರಣ ಬಡ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಕೈಗಾರಿಕೆಗಳಲ್ಲಿ ಯುವ ಸಮು ದಾಯಕ್ಕೆ ಗುತ್ತಿಗೆ ಆಧಾರಿತ ಕೆಲಸ ಮಾತ್ರ ಸಿಗುತ್ತಿರುವುದರಿಂದ ಬದುಕು ಕಟ್ಟಲು ಅಸಾಧ್ಯ ಎನಿಸಿದೆ ಎಂದು ಹೇಳಿದರು.
ಡಿವೈಎಫ್ಐ ಶಕ್ತಿ ದುರ್ಬಲ ಆದರೂ ಗುರಿ ಪ್ರಬಲವಾಗಿದೆ. ಹರೇಕಳ ಸೇತುವೆ ಜನರ ಉಪಯೋಗಕ್ಕೆ ಸಿಗದ ಸಂದರ್ಭ ಗೇಟು ಕಿತ್ತೆಸೆದಿದ್ದು ಡಿವೈಎಫ್ಐ. ಅದಕ್ಕೆ ಸರ್ಕಾರದಿಂದ ಕೇಸಿನ ಬಹುಮಾನ ಸಿಕ್ಕಿದೆ. ಮಹಿಳೆಯರ ಬಗ್ಗೆ ಅವಹೇಳನ ಮಾಡಿದ ಪ್ರಭಾಕರ್ ಭಟ್ ಅವರನ್ನು ಬಂಧಿಸುವ ತಾಕತ್ತು ಇಲ್ಲದ ಸರ್ಕಾರ ಪ್ರತಿಭಟಿಸಿದ ಡಿವೈಎಫ್ಐ ಮುಖಂಡರ ಮೇಲೆ ಕೇಸು ಹಾಕಿರುವುದೇ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಏಕಧರ್ಮ ಆಡಳಿತಕ್ಕೆ ಪ್ರಯತ್ನ ನಡೆಯುತ್ತಿದೆ. ಇವಿಎಂ ತಯಾರಿಕಾ ಸಂಸ್ಥೆಗೆ ಬಿಜೆಪಿ ಪಕ್ಷದ ಸದಸ್ಯರನ್ನು ನೇಮಿಸಲಾಗಿದ್ದು ಚುನಾವಣಾ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎನ್ನುವ ಬಗ್ಗೆ ಯೋಚಿಸುವ ಅನಿವಾರ್ಯತೆ ಇದೆ ಎಂದರು.
ಮುಖಂಡರಾದ ಎಚ್.ಕೆ.ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಉಳ್ಳಾಲ ತಾಲೂಕು ಡಿವೈಎಫ್ಐ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು, ನಿಕಟಪೂರ್ವ ಅಧ್ಯಕ್ಷ ರಫೀಕ್ ಹರೇಕಳ, ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್, ಮಂಗಳೂರು ನಗರ ಸಮಿತಿ ಅಧ್ಯಕ್ಷ ನವೀನ್ ಕೊಂಚಾಡಿ, ಸಿಪಿಐಎಂ ಮುಖಂಡ ಎಚ್.ಕೆ.ಹಮೀದ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಹರೇಕಳ, ಡಿವೈಎಫ್ಐ ಗ್ರಾಮ ಸಮಿತಿ ಕಾರ್ಯದರ್ಶಿ ಪಿ.ಎಚ್.ಹೈದರ್ ಆಲಡ್ಕ, ಹೈದರ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.