ಅನುದಾನ, ಸಿಬ್ಬಂದಿಗಳ ಕೊರತೆಯಿಂದ ಗ್ರಾ.ಪಂ. ಗಳಲ್ಲಿ ಸಮಸ್ಯೆ: ವಿಧಾನಸಭೆಯ ಗಮನ ಸೆಳೆದ ಶಾಸಕಿ ಭಾಗೀರಥಿ ಮುರುಳ್ಯ
ಸುಳ್ಯ: ಅನುದಾನದ ಮತ್ತು ಸಿಬ್ಬಂದಿ ಕೊರತೆಯಿಂದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯಲ್ಲಿ ತೀವ್ರ ಸಮಸ್ಯೆ ಆಗುತಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯ ಗಮನ ಸೆಳೆದಿದ್ದಾರೆ.
ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು ಅನುದಾನ ಬಾರದೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾ.ಪಂ.ಕಟ್ಟಡಗಳ ನಿರ್ಮಾಣ ಪೂರ್ತಿಯಾಗಿಲ್ಲ. ಡಾಟಾ ಎಂಟ್ರಿ ಆಫರೇಟರ್‍ಗಳ ನೇಮಕ ಅರ್ಧಕ್ಕೆ ನಿಂತಿದೆ. ಅಧಿಕಾರಿ, ಸಿಬ್ಬಂದಿ ಕೊರತೆ ಎದುರಾಗಿದೆ. ಅನುದಾನ ಬಿಡುಗಡೆ ಮಾಡಬೇಕು, ಅಧಿಕಾರಿ, ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್‍ಗಳ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಲಭ್ಯತೆಯ ಆಧಾರದ ಮೇಲೆ ಡಾಟಾ ಎಂಟ್ರಿ ಆಫರೇಟರ್ ಮತ್ತು ಸಿಬ್ಬಂದಿಗಳ ನೇಮಕ ಮಾಡಲಾಗುವುದು ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದರು. ಲಭ್ಯತೆಯ ಆಧಾರದಲ್ಲಿ ಅನುದಾನ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.