×
Ad

ತಾ.ಪಂ.ಇಒ - ಹಳೆಯಂಗಡಿ ಗ್ರಾ.ಪಂ. ಸದಸ್ಯರ ನಡುವೆ ಜಗಳ

Update: 2024-02-15 22:46 IST

ಹಳೆಯಂಗಡಿ: ನೀರಿನ ಸಂಪರ್ಕ ನೀಡುವ ಕುರಿತು ಜಿಲ್ಲಾ ಪಂಚಾಯತ್‌ ಇಒ ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್‌ ಸದಸ್ಯರ ನಡುವೆ ಪಂಚಾಯತ್‌ ಮುಂಭಾಗದ ರಸ್ತೆಯಲ್ಲಿ ಜಗಳ ನಡೆದಿದೆ.

ಪಾವಂಜೆ ಪ್ರದೇಶದಲ್ಲಿ ತೀರ್ಥಹಳ್ಳಿ ಮೂಲದ ಉದ್ಯಮಿ ರೋಹಿತ್ ಎಂಬವರು ಅವರ ಮನೆಗೆ ಕುಡಿಯುವ ನೀರಿನ ಸಂಪರ್ಕ ನೀಡುವಂತೆ ಹಳೆಯಂಗಡಿ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿ ಹಣ ಪಾವತಿಸಿದ್ದರು. ಆದರೆ, ಅವರು ಮನೆಯ ಹೆಸರಿನಲ್ಲಿ ಅವರ ಕಚೇರಿಗೆ ನೀರಿನ ಸಂಪರ್ಕ ಕೇಳಿದ್ದ ಪರಿಣಾಮ ಗ್ರಾಮ ಪಂಚಾಯತ್‌ ಅದನ್ನು ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ರೋಹಿತ್‌ ಅವರು, ಪಂಚಾಯತ್ ಇಒ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಪ್ರಕರಣವನ್ನು ಪರಿಶೀಲಿಸಿದ್ದ ತಾ.ಪಂ. ಇಒ ಗುರುಶಾಂತಪ್ಪ ಅವರು, ಕುಡಿಯಲು ಅಥವಾ ಕಚೇರಿಗೆ ಕುಡಿಯುವ ನೀರನ್ನು ಪೂರೈಸದೇ ಇರಬಾದು. ಆದೇಶ ಬಂದ 7 ದಿನಗಳ ಒಳಗಾಗಿ ದೂರು ದಾರ ರೋಹಿತ್‌ ಎಂಬವರಿಗೆ ನೀರಿನ ಸಂಪರ್ಕ ನೀಡುವಂತೆ ಸೂಚಿಸಿದ್ದರು. ಈ ಬೆಳವಣಿಗೆಯ ನಡುವೆ ರೋಹಿತ ಅವರು ಇದೇ ವಿಚಾರವಾಗಿ ಲೋಕಾಯುಕ್ರ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ಆದೇಶ ನೀಡಿ ವಾರ ಕಳೆದರೂ ಇನ್ನೂ ಸಂತ್ರಸ್ತನಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ ಯಾಕೆ ಎಂದು ಇಒ ಗುರು ಶಾಂತಪ್ಪ ಅವರು ಇಂದು ಪಂಚಾಯತ್‌ ಕಚೇರಿಯ ಹೊರಗಿನ ರಸ್ತೆಯಲ್ಲೇ ರಂಪಾಟ ಮಾಡಿದ್ದಾರೆ. ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯನ್ನು ಸಾರ್ವಜನಿಕರ ಮುಂದೆ ಏಕ ವಚನದಲ್ಲೇ ನಿಂದಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಗ್ರಾಮ ಪಂಚಾಯತ್‌ ಸದಸ್ಯರು ದೂರಿದ್ದಾರೆ.

ಘಟನೆಗೆ ಸಂಬಂಧಿಸಿ ವಾರ್ತಾಭಾರತಿ ಜೊತೆ ಮಾತನಾಡಿದ ಹಳೆಯಂಗಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪೂರ್ಣಿಮಾ, ದೂರುದಾರ ರೋಹಿತ್‌ ನಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಯವರೇ ಅಲ್ಲ. ಅವರು ರಾಯಚೂರು ಮೂಲದವರು. ಇಡೀ ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಅಭಾವ ಇದೆ. ಹಾಗಾಗಿ ಮನೆಗಳಿಗೆ ಹೊರತಾಗಿ ವಾಣೀಜ್ಯ ಉದ್ದೇಶಕ್ಕೆ ಕುಡಿಯುವ ನೀರು ನೀಡದಿರುವ ಕುರಿತು ರೋಹಿತ್‌ ಅವರು ಮನವಿ ಸಲ್ಲಿಸುವ ಮೊದಲೇ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅವರು ಕಚೇರಿಯ ಬಳಕೆಗೆ ನೀರಿನ ಸಂಪರ್ಕ ಕೇಳುತ್ತಿದ್ದು, ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಸದ್ಯ ಇಒ ನ್ಯಾಯಲಯದಲ್ಲಿ ಪ್ರಕರಣ ನಡೆಯುತ್ತಿದ್ದಂತೆಯೇ ರೋಹಿತ್‌ ಲೋಕಾಯುಕ್ತ ನ್ಯಾಯಾಲದಲ್ಲಿ ದೂರು ನೀಡಿದ್ದು, ಸದ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅಲ್ಲಿ ಯಾವ ತೀರ್ಪು ಬರುತ್ತದೆಯೋ ಅದನ್ನು ಅನುಸರಿಸಿ ನಾವು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ನುಡಿದರು.

ಗ್ರಾಮ ಪಂಚಾಯತ್ ಗೆ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವ ತೀರ್ಮಾನಕ್ಕೆ ಓರ್ವ ಸರಕಾರಿ ಅಧಿಕಾರಿಯಾಗಿ ಗೌರವ ನೀಡಬೇಕಿತ್ತು. ಆದರೆ, ಅದೆಲ್ಲವನ್ನು ಮರೆತು ಗೂಂಡಾಗಳಂತೆ ವರ್ತಿಸಿದ ತಾ.ಪಂ. ಇಒ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಹಳೆಯಂಗಡಿಯ ನಾಗರೀಕರು ಒತ್ತಾಯಿಸಿದ್ದಾರೆ.

"ನೀರು ಜೀವ ಜಲವಾಗಿರುವುದರಿಂದ ಮನೆ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಪಾವಂಜೆಯಲ್ಲಿ ನನ್ನ ಸ್ವಂತ 6 ಸೆಂಟ್ಸ್‌ ನಿವೇಶನದಲ್ಲಿ ಒಂದು ಬೋರ್‌ವೆಲ್, ಬಾವಿ ಮತ್ತು ಪಂಪ್‌ಸೆಟ್‌ ಅಳವಡಿಸಿ ಬಡವರಿಗೆ ನೀರು ನೀಡುತ್ತಿದ್ದೇನೆ. ಅದನ್ನು ವಾಣಿಜ್ಯ ಬಳಸಿಕೊಳ್ಳುವುದಾದರೆ ಇನ್ನು ನನ್ನ ಬಾವಿ, ಬೋರ್‌ವೆಲ್‌ನಿಂದ ನೀರು ತೆಗೆಯುವುದು ಬೇಡ ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಹಳಿದ್ದೇನೆ".

- ಸತೀಶ್‌ ಭಟ್, ಹಳೆಯಂಗಡಿ

ತಾ. ಪಂ. ಇಒ ಅವರು ಪಂಚಾಯತ್‌ಗೆ ಅನದೀಕೃತವಾಗಿ ಬಂದು ಪಂಚಾಯತ್‌ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು ಹಾಗೂ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. "ಪಿಡಿಒ ಆಗಿರಲು ನೀನು ನಾಲಾಯಕ್. ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲು" ಎಂದು ಪಿಡಿಒ ಅವರಿಗೆ ಬೈದಿದ್ದು, "ರೋಹಿತ್‌ ಮೂತ್ರ ಮಾಡಿದರೆ ತೊಳೆಯಲು ನಿನ್ನ ಮನೆಗೆ ಕರೆದುಕೊಂಡು ಹೋಗು" ಎಂದು ಪಂಚಾಯತ್‌ ಅಧ್ಯಕ್ಷರಿಗೆ ಬೈದಿದ್ದಾರೆ. ಈ ಪ್ರಕರಣದಲ್ಲಿ ತಾಲೂಕು ಪಂಚಾಯತ್‌ ಇಒ ಲಂಚ ಪಡೆದಿರುವ ಬಗ್ಗೆ ಸಂಶಯಿದೆ. ಹಾಗಾಗಿಯೇ ಅವರು ಇಂದು ರೌಡಿಯಂತೆ ವರ್ತಿಸಿರುವ ಸಾಧ್ಯತೆ ಇದೆ ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪೂರ್ಣಿಮಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News