ಶಾಸಕರ ಮೇಲಿನ ಪ್ರಕರಣ ಹಿಂಪಡೆಯಲು ಪೋಷಕರ ನಿಯೋಗ ಒತ್ತಾಯ: ಪೊಲೀಸ್ ಆಯಕ್ತರಿಗೆ ಮನವಿ
ಜೆರೋಸಾ ಶಾಲೆಯ ಎದುರು ಫೆ.12ರಂದು ನಡೆದ ಪ್ರತಿಭಟನೆ (ಫೈಲ್ ಫೋಟೊ)
ಮಂಗಳೂರು, ಫೆ.16: ಜೆರೋಸಾ ಶಾಲಾ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕರಿಬ್ಬರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಹಾಗೂ ಶಾಲೆಯ ಶಿಕ್ಷಕಿಯ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳ ಪೋಷಕರ ನಿಯೋಗವೊಂದು ಮಂಗಳುರ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಮನವಿ ಸಲ್ಲಿಸಿರುವ ನಿಯೋಗವು ಜೆರೋಸಾ ಶಾಲೆಯ ಶಿಕ್ಷಕಿ ಪ್ರಭಾ ತರಗತಿಯಲ್ಲಿ ಪಾಠದ ಸಂದರ್ಭ ಹಿಂದೂ ದೇವರ ವಿರುದ್ಧ ಹಾಗೂ ಪ್ರಧಾನ ಮಂತ್ರಿ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ದೂರಿದೆ.
ಶಾಲೆಯ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಕೋರಿಕೆಯ ಮೇರೆಗೆ ಶಾಲೆಗೆ ಭೇಟಿ ನೀಡಿದ್ದ ಶಾಸಕ ವೇದವ್ಯಾಸ ಕಾಮತ್ ಹಾಗೂ ಇಬ್ಬರು ಕಾರ್ಪೊರೇಟರ್ ಗಳ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಶಾಲೆಯಲ್ಲಿ ನಡೆದ ಪ್ರತಿಭಟನೆ ದಿನದಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ಬಜರಂಗದಳದ ಶರಣ್ ಪಂಪ್ ವೆಲ್ ಸ್ಥಳದಲ್ಲಿರಲಿಲ್ಲ. ಹಾಗಾಗಿ ಅವರ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.