×
Ad

ಮಂಗಳೂರು: ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ

Update: 2024-02-17 20:51 IST

ಮಂಗಳೂರು, ಫೆ.17: ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶನಿವಾರ ನಗರದ ಕ್ಲಾಕ್‌ಟವರ್ ಬಳಿ ವಿಕಲಚೇತನರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.

ಬಳಿಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಸಮಾಜದಲ್ಲಿ ವಿಕಲಚೇತನರು ಕಟ್ಟಕಡೆಯ ಶೋಷಿತ ವರ್ಗವಾಗಿರುತ್ತಾರೆ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಜೊತೆ ಸಾಮಾಜಿಕ ಅಸಮಾನತೆಗಳಿಂದಲೂ ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಸರಕಾರದ ಹಲವು ಯೋಜನೆಗಳಿ ದ್ದರೂ ಅವನ್ನು ಪಡೆಯುವುದು ಒಂದು ಸವಾಲಾದರೆ ಕುಟುಂಬ ನಿರ್ವಹಣೆ, ಬಡತನ, ಹಸಿವು ವಿಕಲಚೇತನರನ್ನು ಘನತೆಯ ಜೀವನದಿಂದ ದೂರಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿಕಲಚೇತನರಿಗೆ ಮಾಸಿಕ ಜೀವನ ನಿರ್ವಹಣಾ ಭತ್ತೆ ಕನಿಷ್ಠ 3,000 ರೂ., ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಇದ್ದರೆ ಕನಿಷ್ಠ 5,000 ರೂ. ಮಾಸಿಕ ನಿರ್ವಹಣ ಭತ್ತೆ ನೀಡಬೇಕು. ಪ್ರಸ್ತುತ ಜಾರಿಯಾಗಿರುವ ಅಂಗವಿಕಲರ ಪೋಷಣಾ ಭತ್ತೆಯನ್ನು ತಡೆಹಿಡಿಯಲ್ಪಡದೆ ಸಮಯಕ್ಕೆ ಸರಿಯಾಗಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಅಂಗವಿಕಲ ವ್ಯಕ್ತಿಗಳ ಕಾಯ್ದೆ 2016ನ್ನು ಜಿಲ್ಲಾಧಿಕಾರಿ ಮತ್ತು ಕಾನೂನು ಪ್ರಾಧಿಕಾರ ಸಮರ್ಪಕವಾಗಿ ಜಾರಿಗೊಳಿಸಬೇಕು. ಮಾಸಿಕ ವೇತನ ಪಡೆಯಲು ನಿಗದಿಗೊಳಿಸಿರುವ ಆದಾಯ ಮಿತಿಯನ್ನು ವಾರ್ಷಿಕ 32 ಸಾವಿರ ರೂ.ದಿಂದ 2 ಲಕ್ಷಕ್ಕೆ ಏರಿಸಬೇಕು. ವಿಕಲಚೇತನರ ಮಾಸಿಕ ಪೋಷಣಾ ಭತ್ತೆ ಪಡೆಯಲು ಬಿಪಿಎಲ್ ರೇಶನ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ವಿಕಲಚೇತನ ವ್ಯಕ್ತಿಯ ಆದಾಯ ವನ್ನು ಮಾತ್ರ ಪರಿಗಣಿಸಬೇಕು. ಸರಕಾರಿ ನೌಕರಿಯಲ್ಲಿ ನೀಡುತ್ತಿರುವ ಮೀಸಲಾತಿಯನ್ನು ಬ್ಯಾಕ್‌ಲಾಗ್ ಮೂಲಕ ಭರ್ತಿ ಮಾಡಬೇಕು. ಸ್ಥಳೀಯಾಡಳಿತದಲ್ಲಿ ಪ್ರತೀ ವರ್ಷ ವಿಕಲಚೇತನರಿಗೆ ಮೀಸಲಿರಿಸಿದ ಶೇ.5 ಅನುದಾನವನ್ನು ಅನುಷ್ಠಾನಗೊಳಿಸಲು ವಿಕಲಚೇತರನ್ನು ಒಳಗೊಂಡ ಸಮಿತಿ ರಚಿಸಬೇಕು. ಶೇ.75 ಅಂಗವೈಕಲ್ಯತೆಯಿರುವ ವಿಶೇಷ ಚೇತನರ ಪೋಷಕರಿಗೆ ವಾರ್ಷಿಕ 12 ಸಾವಿರ ಪೋಷಣಾ ಭತ್ತೆಯನ್ನು ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ನೀಡಬೇಕು. ಅಂಗವಿಕಲರ ಕಲ್ಯಾಣ ಮಂಡಳಿ ಸ್ಥಾಪಿಸಿ, ಅವರ ಸಂಪೂರ್ಣ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ಉಪಾಧ್ಯಕ್ಷ ವೆಂಕಟೇಶ್ ಕೋಣಿ,ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಠ ಚೇತನರ ಸಂಘದ ಅಧ್ಯಕ್ಷ ಡಾ. ಮುರಳೀಧರ ನ್ಯಾಕ್, ದ.ಕ. ಜಿಲ್ಲಾ ವಿಶೇಷಚೇತನರ ಪೋಷಕರ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ, ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜಪ್ಪು, ದ.ಕ. ಜಿಲ್ಲಾ ವಿಶೇಷಚೇತನರ ಪೋಷಕರ ಸಂಘದ ಉಪಾಧ್ಯಕ್ಷ ಅನಿಲ್ ಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News