×
Ad

ಶಾಸಕರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ

Update: 2024-02-19 20:52 IST

ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನವನ್ನು ವಿರೋಧಿಸಿದ ಕಾರಣಕ್ಕೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮನಪಾ ಸದಸ್ಯರು ಹಾಗೂ ಹಿಂದುತ್ವ ಮುಖಂಡರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಇಬ್ಬರು ಶಾಸಕರು, ಮನಪಾದ ಮೂವರು ಸದಸ್ಯರು ಹಾಗೂ ಸಂಘಟನೆಗಳ ನಾಯಕರ ವಿರುದ್ಧ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಪ್ರಕರಣ ದಾಖಲಿಸಲಾಗಿದ್ದು, ಇದನ್ನು ಕೂಡಲೇ ವಾಪಸ್ ಪಡೆಯಬೇಕು, ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮತ್ತು ಕಿಯೊನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಇಬ್ಬರು ಶಾಸಕರು ಸೇರಿದಂತೆ ಐವರ ಮೇಲೆ ದಾಖಲಿಸಿರುವುದನ್ನು ವಾಪಸ್ ಪಡೆಯಿರಿ. ಇಲ್ಲವಾದರೆ ಇದೇ ಕೇಸು ನಿಮಗೆ ಕಚ್ಚುತ್ತದೆ. ಕಾಂಗ್ರೆಸ್‌ನದ್ದು ಕೋಮವಾದದ ಮೆದುಳು ಆಗಿದೆ. ಅದನ್ನು ತೆಗೆಯಲು ಬಿಜೆಪಿ ಕಾರ್ಯಕರ್ತರು ಬುಲ್ಡೋಜರ್ ಆಗಬೇಕು ಎಂದರು.

ಸಿಸ್ಟರ್ ಪ್ರಭಾ ಅವರು ನೀವು ಎಲ್ಲಿ ಅಡಗಿಕುಳಿತುಕೊಂಡಿದ್ದೀರಿ? ನಾನು ಏನು ಹೇಳಿಲ್ಲ ರಾಮನಿಗೆ ಅವಮಾನ ಮಾಡಿಲ್ಲ ಎಂದು ವಾರ್ತಾಭಾರತಿಯಲ್ಲಿ ಮಾತ್ರ ಯಾಕೆ ಹೇಳಿಕೆ ನೀಡಿರುವಿರಿ. ಧೈರ್ಯವಿದ್ದರೆ ನಿಮ್ಮ ಕ್ಲಾಸಿನ ಮಕ್ಕಳನ್ನು ಕರೆದು ಕೊಂಡು ಬಂದು ಇಲ್ಲಿರುವ ಎಲ್ಲ ಪತ್ರಿಕೆಗಳಿಗೆ ಹೇಳಿಕೆ ನೀಡಿ. ಇಲ್ಲವಾದರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗಿ ಎಂದು ಹರಿಕೃಷ್ಣ ಬಂಟ್ವಾಳ ಸವಾಲು ಹಾಕಿದರು.

ರಾಜ್ಯದಲ್ಲಿ ಕಾಂಗ್ರೆಸ್ ದಂಗಲ್ ಇದೆ , ಕಾಂಗ್ರೆಸ್ ದಂಗಲ್‌ಗೆ ನೀವು ಬೆಂಗಾವಲು ನೀಡಿದರೆ ನೀವು ಕಂಗಾಲಾಗುತ್ತೀರಿ ಎಂದು ಪೊಲೀಸರನ್ನು ಎಚ್ಚರಿಸಿದರು.

ಮೂಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿದರು. ಬಿಜೆಪಿ ಧುರೀಣರಾದ ವಿಜಯ ಕುಮಾರ್, ಉದಯ ಕುಮಾರ್ ಶೆಟ್ಟಿ, ಮಹೇಶ್ ಜೋಗಿ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ ಮತ್ತು ದಿವಾಕರ ಪಾಂಡೇಶ್ವರ , ಮನಪಾ ಸದಸ್ಯರಾದ ಶಶಿಕಲಾ, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News