ಬಜೆಟ್ ನಲ್ಲಿ ಬಂಟರ ನಿಗಮಕ್ಕೆ ಅನುದಾನ ನೀಡಬೇಕಿತ್ತು: ಐಕಳ ಹರೀಶ್ ಶೆಟ್ಟಿ
ಮಂಗಳೂರು, ಫೆ.20: ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ವಿಶ್ವ ಬಂಟರ ಸಮ್ಮೇಳನದಲ್ಲಿ ಘೋಷಣೆ ಮಾಡಿ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ಇರುವ ಬಗ್ಗೆ ಬೇಸರವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸಕಾರರು ದಾಖಲಿಸಿದಂತೆ ಪ್ರಾಚೀನ ಕಾಲದಿಂದಲೂ ಬಂಟರ ಯಾನೆ ನಾಡವರು 1500 ವರ್ಷಗಳ ಇತಿಹಾಸ ಹೊಂದಿದ್ದಾರೆ ಎನ್ನವುದು ಗಮನಾರ್ಹ. ಬಂಟರ ಯಾನೆ ನಾಡವರು ನಾಡಿಗೆ ಮಹೋನ್ನತ ಕೊಡುಗೆ ನೀಡಿದವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕಾರಣರಾಗಿದ್ದವರು. ಹೀಗಿದ್ದರೂ ಸಮಾಜದಲ್ಲಿ ಅನೇಕ ಮಂದಿ ದುಃಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ಅನೇಕ ಕುಟುಂಬಗಳು ಇವೆ ಎಂದು ನಮ್ಮ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇದಕ್ಕಾಗಿ ಹಲವಾರು ವರ್ಷಗಳಿಂದ ವಿವಿಧ ಸರಕಾರದಲ್ಲಿ ಬಂಟರ ಅಭಿವೃದ್ಧಿಗಾಗಿ ಸವಲತ್ತುಗಳನ್ನು ಕೇಳುತ್ತಾ ಬಂದಿದ್ದೇವೆ ಎಂದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸುವು ದಾಗಿ ಹೇಳಿದೆ. ಉಡುಪಿಯಲ್ಲಿ ಕಳೆದ ಅಕ್ಟೋಬರ್ 29, 30ರಂದು ನಡೆದ ವಿಶ್ವ ಬಂಟರ ಸಮ್ಮೇಳನದ ಉದ್ಘಾ ಕರಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಭಾಷಣದಲ್ಲಿ ಮುಂದಿನ ಬಜೆಟ್ನಲ್ಲಿ 'ಬಂಟರ ಅಭಿವೃದ್ಧಿ ನಿಗಮ' ಸ್ಥಾಪಿಸಿ 500 ಕೋಟಿ ರೂ. ಮೀಸಲಿರಿಸುವುದಾಗಿ ಘೋಷಿಸಿದ್ದರು. ಆದರೆ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿಗೆ ಯಾವುದೇ ಅನುದಾನ, ಬಂಟರ ಅಭಿವೃದ್ಧಿ ನಿಗಮಕ್ಕೆ ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಂಟ ಶಾಸಕರು ಯಾರೊಬ್ಬರು ದ್ವನಿ ಎತ್ತಲಿಲ್ಲ ಎಂಬುದು ಬೇಸರ ಉಂಟು ಮಾಡಿದೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು.
ಸರಕಾರ ಕೂಡಲೇ 500 ಕೋಟಿ ರೂ. ಅನುದಾನದೊಂದಿಗೆ ಈಗಾಗಲೇ ಘೋಷಣೆ ಮಾಡಿದಂತೆ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಹಕ್ಕೊತ್ತಾಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಭೇದ ಮರೆತು ಎಲ್ಲಾ ಶಾಸಕರು ಸಹಕಾರ ನೀಡಬೇಕು ಮತ್ತು ಸಮುದಾಯದ ಕೆಳಸ್ತರದ ವ್ಯಕ್ತಿಗಳ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ, ಮಾಧ್ಯಮ ವಕ್ತಾರ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.