ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳ ವಾಹನ ಪ್ರವೇಶಕ್ಕೆ ನಿರ್ಬಂಧ: ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸುರತ್ಕಲ್: ಇಲ್ಲಿನ ಎನ್‌ಐಟಿಕೆಯ ಪಿಎಚ್‌ಡಿ ವಿದ್ಯಾರ್ಥಿಗಳ ವಾಹನಗಳು ಕ್ಯಾಂಪಸ್ ಪ್ರವೇಶಿಸದಂತೆ ತಡೆಯಲಾಗುತ್ತಿದೆ ಮತ್ತು ಪ್ರವೇಶಕ್ಕಾಗಿ ವಾಹನಗಳಿಗೆ ಅಂಟಿಸಲಾಗಿದ್ದ ಪಾಸ್ ಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿ ಪಿಎಚ್ ಡಿ ವಿದ್ಯಾರ್ಥಿಗಳು ಎನ್‌ಐಟಿಕೆಯ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ವಾಹನಗಳನ್ನು ಎನ್‌ಐಟಿಕೆ ಆಡಳಿತ ಮಂಡಳಿ ಸಭೆ ನಡೆಸಿ ಭದ್ರತೆ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಕ್ಯಾಂಪಸ್ ನೊಳಗೆ ತರುವುದನ್ನು ಮತ್ತು ಚಾಲನೆ ಮಾಡುವುದಕ್ಕೆ ನಿರ್ಬಂಧ ವಿದಿಸಿತ್ತು. ಈ ಸಂಬಂಧ ವಿದ್ಯಾರ್ಥಿಗಳಿಗೆ ಸೋಮವಾರ ರಾತ್ರಿ ನೋಟಿಸ್ ಜಾರಿಗೊಳಿಸಿ ಮಂಗಳವಾರ ಬೆಳಗ್ಗಿನಿಂದಲೇ ಅದನ್ನು ಕಾರ್ಯರೂಪಕ್ಕೆ ತಂದಿತ್ತು. ಆಡಳಿತ ಮಂಡಳಿಯ ಸೂಚನೆಯಂತೆ ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ಕ್ಯಾಂಪಸ್ ನ ಒಳಗೆ ಕೊಂಡು ಹೋಗುವಂತಿಲ್ಲ. ಕ್ಯಾಂಪಸ್‌ನ ಹೊರಗೆ ನಿಲ್ಲಿಸಿ ಎನ್ ಐಟಿಕೆಯನ್ನು ಪ್ರವೇಶಿಸಬೇಕು ಎಂದು ಹೇಳಿತ್ತು. ಇದರಿಂದ ರೊಚ್ಚಿ ಗೆದ್ದ ವಿದ್ಯಾರ್ಥಿಗಳು, ಇಂದು ಬೆಳಗ್ಗಿನಿಂದ ಎನ್‌ಐಟಿಕೆಯ ಮುಖ್ಯದ್ವಾರವನ್ನು ತಡೆದು ವಾಹನ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ಮಾಡಿದರು.
ಮಧ್ಯಾಹ್ನದ ವೇಳೆ ಸ್ಥಳಕ್ಕೆ ಬಂದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಪ್ರೊ. ಚಿತ್ತರಂಜನ್ ಹೆಗ್ಡೆ ಅವರನ್ನು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು. ನಾವು ಕ್ಯಾಂಪಸ್ ನ ಒಳಗಡೆ ಮನೆ ಮಾಡಿಕೊಂಡಿದ್ದೇವೆ. ನಮ್ಮ ಜೊತೆ ಸಣ್ಣ ಮಕ್ಕಳು, ಹಿರಿಯ ನಾಗರೀಕರು ವಾಸವಾಗಿದ್ದಾರೆ. ಒಂದು ವೇಳೆ ಅವರಿಗೆ ಆರೋಗ್ಯ ಸಮಸ್ಯೆಗಳಾದರೆ, ಅಥವಾ ಬೇರೆ ಯಾವುದೇ ರೀತಿಯ ತೊಂದರೆಗಳಾದರೆ ಯಾರು ಹೊಣೆ. ನಮ್ಮ ವಾಹನಗಳನ್ನು ಕ್ಯಾಂಪಸ್ ನಿಂದ ಹೊರಗೆ ಇಟ್ಟು ಬರುವಂತೆ ಹೇಳಿರುವುದು ಅಕ್ಷಮ್ಯ. ಮನೆ ಮಂದಿಗೆ ತುರ್ತು ಆಸ್ಪತ್ರೆಗಳಿಗೆ ಸಾಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಸಾರ್ವಜನಿಕರ ವಾಹನ, ಆಟೊ ರಿಕ್ಷಾಗಳಿಗೂ ಕ್ಯಾಂಪಸ್ ನ ಒಳಗೆ ಪ್ರವೇಶ ನೀಡಲಾಗುತ್ತದೆ. ಆದರೆ, ನಾವು ಇಲ್ಲಿನ ವಿದ್ಯಾರ್ಥಿಗಳು, ಆದರೂ ನಮಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಪ್ರೊ. ಚಿತ್ತರಂಜನ್ ಹೆಗ್ಡೆ ಮತ್ತು ಡಾ. ಬಾಲು ಅವರ ನೇತೃತ್ವದಲ್ಲಿ ಸಭೆ ನಡೆಸಿದ ಆಡಳಿತ ಮಂಡಳಿ ಕ್ಯಾಂಪಸ್ ನಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದು ಕೊಂಡರು. ಆ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು ಎಂದು ತಿಳಿದು ಬಂದಿದೆ.