×
Ad

ತುಳು -ಕನ್ನಡ -ಸಂಸ್ಕೃತ ಸಾಹಿತ್ಯಕ್ಕೆ ವಾದಿರಾಜರ ಕೊಡುಗೆ ಅನನ್ಯ: ಪ್ರದೀಪ ಕುಮಾರ ಕಲ್ಕೂರ

Update: 2024-02-22 19:10 IST

ಮಂಗಳೂರು: ಗುರು ವಾದಿರಾಜರು ಅಷ್ಟ ಮಠಗಳ ಪರಂಪರೆಯಲ್ಲಿ ಬಂದಿರುವ ಯತಿ ಶ್ರೇಷ್ಠರಲ್ಲಿ ಪ್ರಮುಖರು. ಮುಖ್ಯ ವಾಗಿ ಪ್ರತೀ ಎರಡು ತಿಂಗಳಿಗೊಂದಾವರ್ತಿ ನಡೆಯುತ್ತಿದ್ದ ಮಠದ ಆಡಳಿತಾತ್ಮಕ ಪರ್ಯಾಯದ ವ್ಯವಸ್ಥೆಯನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸುವ ಮೂಲಕ ಹೊಸ ಆಯಾಮ ನೀಡಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.

ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ವಾದಿರಾಜ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿ ಅಷ್ಠ ಮಠಗಳಲ್ಲಿ ಇಂದಿಗೂ ಆಡಳಿತದ ಹಸ್ತಾಂತರದ ವ್ಯವಸ್ಥೆ ಅನೂಚಾನವಾಗಿ ತಲಾ ಎರಡು ವರ್ಷಗಳಿಗೊಮ್ಮೆ ನಡೆದುಬರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹಿಂದೂ ಧರ್ಮದ ಅನೇಕ ಜನಾಂಗದವರಿಗೂ ಧಾರ್ಮಿಕ ದೀಕ್ಷೆಯನ್ನಿತ್ತು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ್ದ ಮಹಾಮಹಿಮರಿವರು. ಪೂಜ್ಯರು ರಚಿಸಿರುವ ಅನೇಕ ಕೃತಿಗಳು, ಕೀರ್ತನೆಗಳು, ಗ್ರಂಥಗಳು ಸಾರಸ್ವತ ಲೋಕದ ದೊಡ್ಡ ಕೊಡುಗೆಯಾಗಿದೆ ಎಂದರು.

ತುಳು ಗ್ರಾಮ್ಯ ಭಾಷೆಯಲ್ಲಿ ಕೃತಿ ಬರೆಯುವ ಮೂಲಕ ಹೊಸ ಆಯಾಮವನ್ನೇ ಸೃಷ್ಟಿಸಿರುವ ವಾದಿರಾಜರು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲೂ ಉಪಯುಕ್ತ ಗ್ರಂಥಗಳನ್ನು ಬರೆಯುವ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಕಲ್ಕೂರ ನುಡಿದರು.

ಈ ಸಂದರ್ಭ ವಿ.ಬಾಲಕೃಷ್ಣ ಐತಾಳ್, ಪೂರ್ಣಿಮಾ ರಾವ್ ಪೇಜಾವರ, ವೀಣಾ ಜೋಶಿ, ಶಶಿಪ್ರಭಾ ಐತಾಳ್, ಅನಿತಾ ಭಟ್, ವಿನೋದಾ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News