×
Ad

ಶಿಕ್ಷಣ-ಸಾಹಿತ್ಯ ಜೊತೆಗೂಡಿ ಸಾಗಲಿ: ಡಾ. ಸರ್ಫ್ರಾಝ್ ಹಾಸಿಂ

Update: 2024-02-23 19:14 IST

ಮಂಗಳೂರು: ಪ್ರತಿಯೊಬ್ಬರೂ ತನ್ನ ಮಾತೃಭಾಷೆಯನ್ನು ಪ್ರೀತಿಸಬೇಕು ಮತ್ತು ಅಭಿಮಾನ ಪಡಬೇಕು. ಆವಾಗ ಮಾತ್ರ ಆಯಾ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಅಗತ್ಯವೂ ಇದೆ. ಅದಕ್ಕೆ ಪೂರಕವಾಗಿ ಶಿಕ್ಷಣದ ಜೊತೆ ಸಾಹಿತ್ಯವು ಜೊತೆಗೂಡಿ ಸಾಗಬೇಕಾಗಿದೆ ಎಂದು ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಝ್ ಜೆ. ಹಾಸಿಂ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ದೇರಳಕಟ್ಟೆಯ ‘ಮೇಲ್ತೆನೆ’ಯ ಸಹಯೋಗದಲ್ಲಿ ಕೊಣಾಜೆ ನಡು ಪದವಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಸಹಕಾರದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ಯಾರಿ ಕವಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ‘ಬ್ಯಾರಿ’ಯ ತಾತ್ಸಾರದ ಭಾವನೆಯಿತ್ತು. ಆದರೆ ಈಗ ಹಾಗಿಲ್ಲ. ಬ್ಯಾರಿ ಎಂದು ಅಭಿಮಾನಪಡುವಂತಹ ವಾತಾ ವರಣ ಸೃಷ್ಟಿಯಾಗಿದೆ. ಇದಕ್ಕೆ ಬ್ಯಾರಿ ಅಕಾಡಮಿ, ಸಂಘಟನೆಗಳು, ಸಾಹಿತಿ-ಕಲಾವಿದರ ಶ್ರಮ ಕಾರಣವಾಗಿದೆ ಎಂದು ಡಾ. ಸರ್ಫ್ರಾಝ್ ಜೆ. ಹಾಸಿಂ ಹೇಳಿದರು.

ಅತಿಥಿಗಳಾಗಿ ಪಿಎ ಕಾಲೇಜಿನ ಎಜಿಎಂ ಶರ್ಫುದ್ದೀನ್ ಪಿ.ಕೆ., ಪಿಎ ಕಾಲೇಜಿನ ಪಿಟಿ ಪ್ರಾಂಶುಪಾಲ ಕೆ.ಪಿ. ಸೂಫಿ, ಪಿಎ ಕಾಲೇಜಿನ ವಿದ್ಯಾರ್ಥಿ ವ್ಯವಹಾರ ವಿಭಾಗದ ಡೀನ್ ಸೈಯದ್ ಅಮೀನ್, ಪಿಎ ಕಾಲೇಜಿನ ಫಾರ್ಮಸಿ ವಿಭಾಗದ ಉಪ ಪ್ರಾಂಶುಪಾಲ ಡಾ. ಮುಬೀನ್ ಭಾಗವಹಿಸಿದ್ದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಶಮೀಮಾ ಕುತ್ತಾರ್, ಹಾಜಿ ಇಬ್ರಾಹೀಂ ನಡುಪದವು, ರಮೀಝಾ ಎಂ.ಬಿ., ಫಯಾಝ್ ದೊಡ್ಡಮನೆ, ಸಿಹಾನಾ ಬಿ.ಎಂ., ನಿಝಾಮ್ ಗೋಳಿಪಡ್ಪು, ಸಾರಾ ಮಸ್ಕುರುನ್ನಿಸಾ, ಕಾಲೇಜಿನ ವಿದ್ಯಾರ್ಥಿ ಶಫೂಕ್ ಕವನ ವಾಚಿಸಿದರು.

ಮೇಲ್ತೆನೆಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಬಾಷಾ ನಾಟೆಕಲ್, ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಕಲ್ಕಟ್ಟ, ಸಿದ್ದೀಕ್ ಎಸ್. ರಾಝ್ ಉಪಸ್ಥಿತರಿದ್ದರು.

ಕಾಲೇಜಿನ ಸಿಎಸ್ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಅಕಾಡಮಿಯ ರಿಜಿಸ್ಟ್ರಾರ್ ಆರ್.ಮನೋಹರ ಕಾಮತ್ ಸ್ವಾಗತಿಸಿದರು. ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ಥಬೈಲ್ ವಂದಿಸಿದರು. ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News