ದೈವಚಾಕರಿ ನಡೆಸುವವರಿಗೂ ಅರ್ಚಕರ ಸವಲತ್ತುಗಳು; ತುಳುನಾಡಿಗೆ ಸಂದ ಗೌರವ: ದಿನೇಶ್ ಕುಂಪಲ
ಉಳ್ಳಾಲ: ಕೇರಳ ಮಾದರಿಯಲ್ಲಿ ಜಿಲ್ಲೆಯ ದೈವಸ್ಥಾನದ ದೈವ ಚಾಕರಿ ವರ್ಗದವರಿಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳ ಪಟ್ಟ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಿಗುವಂತಹ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸಿಗಲಿದ್ದು, ಫೆ.20ರ ಅಧಿವೇಶನ ದಲ್ಲಿ ಸ್ಪೀಕರ್ ಖಾದರ್ ಅವರ ಮತುವರ್ಜಿಯಂತೆ ಹಲವು ವರ್ಷಗಳ ಬೇಡಿಕೆ ಕಾರ್ಯಗತಗೊಂಡಿದೆ, ಇದು ತುಳುನಾಡಿನ ಜನತೆಗೆ ಸಂದ ಗೌರವವಾಗಿದೆ ಎಂದು ದಿನೇಶ್ ಕುಂಪಲ ಹೇಳಿದ್ದಾರೆ.
ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ ಫೆ.20ರ ಕಲಾಪದಲ್ಲಿ ಮಹತ್ವದ ಕಾರ್ಯಕ್ರಮ ಜಾರಿ ಮಾಡಿದೆ. ದೇವಾಲಯ, ದೈವಸ್ಥಾನಗಳಲ್ಲಿ ಇರುವ ಕೆಲವು ಸಮಸ್ಯೆಗಳಿಗೆ ತಿದ್ದುಪಡಿ ತಂದಿದೆ. ದೈವ ಚಾಕರಿ ಮಾಡುವವರಿಗೆ ವಿಶೇಷ ಒತ್ತು ನೀಡಿ, ಅರ್ಚಕರಿಗೆ ಇರುವ ಸ್ಥಾನಮಾನ, ಸಂಭಾವನೆ, ಗೌರವಧನ ದೈವ ಚಾಕರಿ ಮಾಡುವವರಿಗೂ ಮುಂದಿನ ದಿನಗಳಲ್ಲಿ ಸಿಗಲಿದೆ. ಪರಂಪರಾಗತವಾಗಿ ದೈವಸ್ಥಾನದ ಬಳೆ, ಬಟ್ಟೆ ಹಾಕದೆ ಆಚಾರಪಟ್ಟವರು ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಸಣ್ಣ ಸಂಭಾವನೆ ಮಾತ್ರ ಸಿಗುತಿತ್ತು. ಈ ಕುರಿತು ಅಂದು ಶಾಸಕರಾಗಿದ್ದ ಯು.ಟಿ ಖಾದರ್ ಅವರು ಕೇರಳ ಮಾದರಿಯಲ್ಲಿ ದೈವಚಾಕರಿ ನಡೆಸುವವರಿಗೂ ಸರಕಾರ ಸವಲತ್ತುಗಳನ್ನು ನೀಡಬೇಕೆಂದು ಅಂದಿನ ಸರಕಾರದ ಗಮನ ಸೆಳೆದಿದ್ದರು. ಇದೀಗ ಧಾರ್ಮಿಕ ದತ್ತಿ ಸಚಿವರಾದ ರಾಮಲಿಂಗರೆಡ್ಡಿ ದೇವಸ್ಥಾನಗಳ ಕುರಿತು ಪ್ರಸ್ತಾಪವನ್ನು ಅಧಿವೇಶನದಲ್ಲಿ ಇಡುತ್ತಿ ದ್ದಂತೆ, ತುಳುನಾಡಿನ ದೈವ ಚಾಕರಿಯವರ ವಿಚಾರವನ್ನು ಮುಂದಿಟ್ಟಿರುವುದು ಹಿಂದುಳಿದ ವರ್ಗ ಸೇರಿದಂತೆ ತುಳು ನಾಡಿನ ಸಮಸ್ತ ಜನರಿಗೆ ಕೊಟ್ಟಂತಹ ಸಂತಸದ ವಿಚಾರವಾಗಿದೆ. ಎ ಗ್ರೇಡ್ ದೇವಸ್ಥಾನಗಳಲ್ಲಿ ಸಹಾಯಕ ಆಯುಕ್ತರಿಗೆ ರೂ. 25 ಲಕ್ಷ ಸೀಮಿತವಿದ್ದ ಖರ್ಚನ್ನು ರೂ.1 ಕೋಟಿವರೆಗೆ ಬಿಡುಗಡೆಗೊಳಿಸುವ ಅವಕಾಶ, ಜಿಲ್ಲಾಧಿಕಾರಿಗಳಿಗೂ ಆಯಾಯ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ರೂ.1 ಕೋಟಿಯಿಂದ ರೂ. 5 ಕೋಟಿವರೆಗೂ ಖರ್ಚು ಮಾಡುವ ಅವಕಾಶವನ್ನು ತಿದ್ದುಪಡಿ ಮಾಡಲಾಗಿದೆ.
ಸಿ ಗ್ರೇಡ್ ದೇವಸ್ಥಾನಗಳಿಗೂ ಈ ಮೂಲಕ ಅನುದಾನ ಸಿಗಲಿದೆ. ರೂ. 5,000 ದಿಂದ 50,000 ಅರ್ಚಕರ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಸ್ಕಾಲರ್ ಶಿಪ್ ನೀಡುವ ಕೆಲಸವಾಗಿದೆ.ದೇವಸ್ಥಾನ ಕಟ್ಟಲು, ಮೂರ್ತಿ ಕಟ್ಟುವ ವಿಶ್ವಕರ್ಮ ಸಮಾಜ, ದೇವಸ್ಥಾನದ ಸಂಬಂಧ ಇರಬೇಕು ಅನ್ನುವ ಉದ್ದೇಶದಿಂದ ಎಲ್ಲಾ ಧಾರ್ಮಿಕ ದತ್ತಿಗೆ ಒಳಪಡುವ ಎಲ್ಲಾ ಆಡಳಿತ ಸಮಿತಿಯಲ್ಲಿ ಸಮಾಜದ ಒಬ್ಬರಿಗೆ ಮೀಸಲಾತಿಯನ್ನು ನೀಡಲಾಗಿದೆ.
ಸುದ್ಧಿಗೋಷ್ಠಿಯಲ್ಲಿ ಡಿಸಿಸಿ ಸದಸ್ಯ ಸುರೇಶ್ ಭಟ್ನಗರ, ಬ್ಲಾಕ್ ಉಪಾಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ಬ್ಲಾಕ್ ಇಂಟೆಕ್ ಅಧ್ಯಕ್ಷ ವಿಶಾಲ್ ಕೊಲ್ಯ ಉಪಸ್ಥಿತರಿದ್ದರು.