ದೇಹ ಛಿದ್ರವಾದರೂ ದೇಶ ಛಿದ್ರಗೊಳ್ಳಲು ಬಿಡಲಾರೆವು: ಬಸವರಾಜ ಪೂಜಾರ
ಮಂಗಳೂರು: ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ ಡಿವೈಎಫ್‌ಐ ಸಂಗಾತಿಗಳು ಅಪಾರ ಪ್ರಮಾಣದ ತ್ಯಾಗ ಬಲಿದಾನಗೈದಿದ್ದಾರೆ. ನಮ್ಮ ದೇಹಗಳು ಛಿದ್ರವಾದರೂ ಸರಿ ದೇಶವನ್ನು ಛಿದ್ರಗೊಳ್ಳಲು ನಾವು ಬಿಡಲಾರೆವು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಗರದ ಬಜಾಲ್‌ನಲ್ಲಿ ಡಿವೈಎಫ್‌ಐ ನಾಯಕ ಶ್ರೀನಿವಾಸ್ ಬಜಾಲ್ ಅವರು ಹುತಾತ್ಮರಾದ ಸ್ಥಳದಲ್ಲಿ ಶುಕ್ರವಾರ ಪುಷ್ಪಾರ್ಪಣೆಗೈದು ಡಿವೈಎಫ್‌ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಧ್ವಜ ಸ್ಥಂಭ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಆಮೀಷವೊಡ್ಡಿ ದಶಕದಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಬದಲು ಯುವ ಜನರನ್ನು ಕೋಮು ವಿಷಬೀಜ ಬಿತ್ತಿ ಒಡೆಯಲು ಮುಂದಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಬಸವರಾಜ ಪೂಜಾರ ಹೇಳಿದರು.
ಬಜಾಲ್‌ನಿಂದ ತೊಕ್ಕೊಟ್ಟುವರೆಗೆ ಧ್ವಜಸ್ಥಂಭವನ್ನು ಮತ್ತು ಇನ್ನೊಬ್ಬ ಸಂಗಾತಿ ಭಾಸ್ಕರ್ ಕುಂಬ್ಳೆ ಹುತಾತ್ಮರಾದ ಸ್ಥಳದಿಂದ ಹುತಾತ್ಮ ಜ್ಯೋತಿಯನ್ನು ಸುನೀಲ್ ಕುಮಾರ್ ಬಜಾಲ್ ಬೆಳಗಿಸಿ ಮಾತನಾಡಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹುತಾತ್ಮ ಜ್ಯೋತಿ ಮತ್ತು ಧ್ವಜ ಸ್ಥಂಭದ ನಾಯಕತ್ವ ವಹಿಸಿದ್ದರು.
ಈ ವೇಳೆ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ರಝಾಕ್ ಮೊಂಟೆಪದವು, ರಿಜ್ವಾನ್ ಹರೇಕಳ, ಯೋಗೀಶ್ ಜಪ್ಪಿನಮೊಗರು, ದೀಪಕ್ ಬಜಾಲ್, ದೀರಾಜ್ ಬಜಾಲ್, ಮುಹಾಝ್, ಫಿಜಿ ರಫೀಕ್, ಅಶ್ರಫ್ ಹರೇಕಳ, ಮಿಥುನ್ ಕುತ್ತಾರ್, ರಾಮಚಂದ್ರ ಬಬ್ಬುಕಟ್ಟೆ ಉಪಸ್ಥಿತರಿದ್ದರು.