ಸರ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಬಜಾಲ್ ಜೆ.ಎಂ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯಿಂದ 16 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚೆರ್ಕಳದ ಪ್ರಸಕ್ತ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಅಲಿ ಯಾನೆ ಅಶ್ರು (32) ಮತ್ತು ಬಿ ಮೂಡ ಗ್ರಾಮದ ಶಾಂತಿ ಅಂಗಡಿಯ ಜುಬೇರ್ (32) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 90,000 ರೂ. ಬೆಲೆಯ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿ ಅಲಿ ಯಾನೆ ಅಶ್ರು ವಿರುದ್ಧ ಬದಿಯಡ್ಕ, ಮಂಜೇಶ್ವರ, ಬಂಟ್ವಾಳ ನಗರ, ವಿಟ್ಲ, ಬಂಟ್ವಾಳ ಗ್ರಾಮಾಂತರ, ಬರ್ಕೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸಹಿತ 15 ಪ್ರಕರಣಗಳು ದಾಖಲಾಗಿವೆ.
ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದ ಎಸ್ಸೈಗಳಾದ ಶಿವಕುಮಾರ್, ಅನಿತಾ ನಿಕ್ಕಂ, ಎಸ್ಸೈ ವೆಂಕಟೇಶ್, ಚಂದ್ರಶೇಖರ ಮತ್ತು ಸಿಬ್ಬಂದಿಗಳಾದ ಜಯಾನಂದ, ಕುಶಾಲ್ ಹೆಗ್ಡೆ, ದೀಪಕ್ ಕೋಟ್ಯಾನ್, ರಾಜೇಶ್ ಕೆ.ಎನ್, ರಾಘವೇಂದ್ರ, ಸಂತೋಷ್ ಮಾದರ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.