×
Ad

ಕಣಚೂರು ಆಸ್ಪತ್ರೆಯಲ್ಲಿ ‌ನಾಲ್ಕನೇ ಹಂತದಲ್ಲಿ ಹರಡಿದ್ದ ಕ್ಯಾನ್ಸರ್‌ ಗೆ ಯಶಸ್ವಿ ಶಸ್ತ್ರಚಿಕಿತ್ಸೆ

Update: 2024-02-24 18:39 IST

ಕೊಣಾಜೆ: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಂಕಲಾಜಿ ವಿಭಾಗ ಮಹಿಳೆಯೊಬ್ಬರಿಗೆ ನಾಲ್ಕನೇ ಹಂತದಲ್ಲಿ ಹರಡಿದ್ದ ಕ್ಯಾನ್ಸರ್‌ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿ 8 ಕೆ.ಜಿ ತೂಕದ ಗೆಡ್ಡೆಯನ್ನು ಹೊರತೆಗೆದು ಗುಣಮುಖರಾಗಿಸಿದ್ದಾರೆ.

ಈ ಮೂಲಕ ನಾಲ್ಕನೇ ಹಂತದಲ್ಲಿಯೂ ಕ್ಯಾನ್ಸರ್‌ ರೋಗಿಗಳನ್ನು ಬದುಕಿಸಬಹುದಾದ ಭರವಸೆಯನ್ನು ಸಂಸ್ಥೆ ಮೂಡಿಸಿದೆ. ಇಬ್ಬರು ಕ್ಯಾನ್ಸರ್‌ ಬಾಧಿತ ಮಹಿಳೆಯರ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಕಣಚೂರು ಆಂಕಲಾಜಿ ವಿಭಾಗ ಕೈಗೊಂಡಿದೆ ಎಂದು ಸರ್ಜಿಕಲ್‌ ಆಂಕಲಾಜಿ ಸ್ಪೆಷಲಿಸ್ಟ್‌ ಡಾ.ರವಿವರ್ಮ ಹೇಳಿದ್ದಾರೆ.

ಅವರು ನಾಟೆಕಲ್‌ ಕಣಚೂರು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

40ರ ಹರೆಯದ ಮಹಿಳೆ ಒಂದೂವರೆ ವರ್ಷಗಳ ಕಾಲ ಬಲ ಪ್ರಷ್ಠದಲ್ಲಿ ಊತದ ತೊಂದರೆಗೊಳಗಾಗಿದ್ದರು. ಈ ಕುರಿತು ಪರೀಕ್ಷೆ ನಡೆಸಿದಾಗ ಆಕೆಗೆ ಕ್ಯಾನ್ಸರ್‌ನ ಹೆಚ್ಚು ಅಪಾಯಕಾರಿ ರೂಪವಾದ ಸಾರ್ಕೋಮಾ ಇರುವುದು ಪತ್ತೆಯಾಯಿತು, ಅದು ರೋಗಿಯ ಶ್ವಾಸಕೋಶಕ್ಕೆ ಹರಡಿ ಹಂತ 4ಕ್ಕೆ ತಲುಪಿದ್ದರು. ರೋಗಿಯು ಇತರ ಕಡೆ ತೋರಿಸಿದಾಗ ಅಂಕೊಲಾಜಿಸ್ಟ್‌ಗಳು ಉಪಶಾಮಕ ಕೀಮೋಥೆರಪಿಯನ್ನು ಏಕೈಕ ಆಯ್ಕೆಯಾಗಿ ಸಲಹೆ ನೀಡಿದ್ದರು ಮತ್ತು ನಾಲ್ಕು ಹಂತ ಗಳ ಕೀಮೋಥೆರಪಿಯನ್ನು ಸ್ವೀಕರಿಸಿದರೂ, ಗೆಡ್ಡ ಬೆಳೆಯುತ್ತಲೇ ಹೋಗಿತ್ತು. ನಂತರ ರೋಗಿಯು ಚಿಕಿತ್ಸೆಗಾಗಿ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಂಕೊಲಾಜಿ ವಿಭಾಗದ ಶಸ್ತ್ರಚಿಕಿತ್ಸಕ ಡಾ. ರವಿವರ್ಮ ಅವರನ್ನು ಸಂಪರ್ಕಿಸಿದ್ದಾರೆ.

ತಕ್ಷಣ ಶಸ್ತ್ರಚಿಕಿತ್ಸೆ ಕೈಗೊಂಡ ಡಾ.ರವಿವರ್ಮ ನೇತೃತ್ವದ ವೈದ್ಯರ ತಂಡ 8 ಕೆ.ಜಿ ತೂಕದ ಗೆಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಯಿತು. ಗಾಲಿಖುರ್ಚಿಯಲ್ಲಿ ಬಂದ 40 ವರ್ಷದ ಮಹಿಳೆ 10 ದಿನಗಳಲ್ಲೇ ಮಾರಕ ಕ್ಯಾನ್ಸರ್‌ ಕಾಯಿಲೆಯಿಂದ ಹೊರಬಂದು ಮನೆಗೆ ನಡೆದುಕೊಂಡು ಹೋಗುವಂತಾಗಿದೆ.

54 ವರ್ಷದ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌ ಕಂಡುಬಂದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಅವರು ಸಂಪೂರ್ಣ ಸ್ತನವನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೀಮೋಥೆರಪಿಯನ್ನು ಪಡೆದರು. ಅದಾಗ್ಯೂ ಎದೆ ನೋವು ಕಾಣಿಸಿ ಕೊಂಡು ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಭಿಪ್ರಾಯಗಳನ್ನು ಕೇಳಿದಾಗ, ಎದೆ ಮೇಲ್ಭಾಗದ ಮೂಳೆಗಳಲ್ಲಿ ಕ್ಯಾನ್ಸರ್ ಪತ್ತೆಯಾಗಿದ್ದು, ಹೃದಯಕ್ಕೆ ಹರಡುವುದನ್ನು ಬಹಿರಂಗಪಡಿಸಿತ್ತು. ಚಿಕಿತ್ಸೆ ಅಸಾಧ್ಯ ಎಂದು ಪರೀಕ್ಷಿಸಿದ ವೈದ್ಯರು ಸಲಹೆ ನೀಡಿ ವಿಕಿರಣ ಚಿಕಿತ್ಸೆಯು ಸ್ವಲ್ಪ ದಿನಗಳ ಪರಿಹಾರವನ್ನು ನೀಡಿತ್ತು. ನಂತರ ರೋಗಿಯು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಶಸ್ತ್ರ, ಚಿಕಿತ್ಸಕರಾದ ಡಾ. ರವಿವರ್ಮ ಅವರನ್ನು ಸಂಪರ್ಕಿಸಿದ್ದು, ಅವರು ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಸ್ಮರ್ನಮ್ ಮತ್ತು ಪಕ್ಕೆಲುಬುಗಳನ್ನು ಒಳಗೊಂಡಂತೆ ಸಂಪೂರ್ಣ ಎದೆಯ ಮೇಲ್ಬಾಗವನ್ನು ತೆಗೆದು ಹಾಕಿ, ಟೈಟಾನಿಯಂ ಜಾಲರಿಯನ್ನು ಬಳಸಿಕೊಂಡು ಅದನ್ನು ಮರು ನಿರ್ಮಾಣ ಮಾಡಿ, ಯಶಸ್ವೀ ಶಸ್ತ್ರಚಿಕಿತ್ಸೆ ಪೂರೈಸಿದರು.

ಅಪರೂಪದ ಶಸ್ತ್ರಚಿಕಿತ್ಸಾ ತಂಡದಲ್ಲಿ ರೇಡಿಯಾಲಜಿಸ್ಟ್‌ ಡಾ.ರಘುರಾಮ್‌ , ಮೆಡಿಕಲ್‌ ಆಂಕಲಾಜಿಸ್ಟ್‌ ಡಾ.ಗುರುಪ್ರಸಾದ್‌ ಭಟ್‌ , ಪ್ಲಾಸ್ಟಿಕ್‌ ಆಂಡ್‌ ರಿಕನ್ಟ್ರಕ್ಟಿವ್‌ ಸರ್ಜನ್‌ ಡಾ.ಕುಮಾರ್‌ ಕೃಷ್ಣ , ಅನೆಸ್ತೀಷಿಯಾ ವೈದ್ಯರಾದ ಡಾ.ಸ್ಯಾಮುವೆಲ್, ಭಾಗಿಯಾಗಿದ್ದರು.

ಗರ್ಭಿಣಿಯರಿಗೆ ಉಚಿತ ಸೇವೆ

ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ ಮತನಾಡಿ ಕಣಚೂರು ಆಸ್ಪತ್ರೆ ಸುತ್ತಲಿನ ಮಂಚಿ, ಕೊಣಾಜೆ, ಮಂಜನಾಡಿ, ಕಿನ್ಯಾ, ತಲಪಾಡಿ, ಕೋಟೆಕಾರು ಪಟ್ಟಣ ಪಂಚಾಯಿತಿ, ಉಳ್ಳಾಲ ನಗರಸಭೆ ವ್ಯಾಪ್ತಿಯ ಗರ್ಭಿಣಿಯರಿಗೆ ಉಚಿತ ಪರೀಕ್ಷೆಗಳನ್ನು ಆಸ್ಪತ್ರೆ ಕೈಗೊಂಡಿದೆ. ಸ್ಕ್ಯಾನಿಂಗ್‌, ರಕ್ತ ಪರೀಕ್ಷೆ, ಆರ್‌ ಬಿಎಸ್‌, ಸಿರೋಲಾಜಿ, ಮೂತ್ರ ಪರೀಕ್ಷೆ, ಗ್ಲುಕೋಸ್‌ ಚಾಲೆಂಜ್‌ ಪರೀಕ್ಷೆ ಮತ್ತು ವ್ಯಾಕ್ಸಿನೇಷನ್‌ ಅನ್ನು ಉಚಿತವಾಗಿ ಕೈಗೊಳ್ಳಲಾಗಿದೆ. ಸಾಮಾನ್ಯ ವಾರ್ಡಿನಲ್ಲಿ ಸಾಮಾನ್ಯ ಹೆರಿಗೆ, ಸಿಸೇರಿಯನ್‌ ಹೆರಿಗೆಯೂ ಉಚಿತವಾಗಿದೆ ಎಂದರು.

ವೈದ್ಯಕೀಯ ಕಾಲೇಜುಗಳ ಡೀನ್‌ ಡಾ.ಯು.ಪಿ ರತ್ನಾಕರ್‌ ಮಾತನಾಡಿ, ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಹಲವು ವಿದ್ಯಾರ್ಥಿಗಳು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳ ಕೈಗೊಂಡ ಪರೀಕ್ಷೆಗಳಲ್ಲಿ ಚಿನ್ನದ ಪಪದಕ ಸಹಿತ ಹಲವು ಪುರಸ್ಕಾರಗಳನ್ನು ಪಡೆದು ಸಂಸ್ಥೆಗೆ ಗೌರವವನ್ನು ತಂದುಕೊಟ್ಟಿದ್ದಾರೆ. ಕಣಚೂರು ವೈದ್ಯಕೀಯ ವಿಜ್ಞಾನಗಳ ಡಾ. ಮಧುರಾ ಕೆ.ಐ ರಾಜ್ಯಕ್ಕೆ ಮೊದಲನೇ ರ್ಯಾಂಕ್‌ ಹಾಗೂ 18 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು ಕೊಂಡಿದ್ದಾರೆ. ಕಣಚೂರು ನರ್ಸಿಂಗ್‌ ವಿಜ್ಞಾನಗಳ ಕಾಲೇಜಿನ ಆಷಿತಾ ಜೋಸೆಫ್‌ ರಾಜ್ಯಕ್ಕೆ ಐದನೇ ರ್ಯಾಂಕ್‌ ಮತ್ತು 13 ವಿದ್ಯಾರ್ಥಿಗಳು ವಿಷಯವಾರು ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಣಚೂರು ಫಿಸಿಯೋಥೆರಪಿ ಕಾಲೇಜಿನ ಟೆನ್ಝಿನ್‌ ಯಾಂಗ್ಝಾಮ್‌ 7 ನೇ ಸ್ಥಾನ ಮತ್ತು ಕರ್ಪೊ ತಮಾಂಗ್‌ 9 ನೇ ರ್ಯಾಂಕ್‌ , ಎಂಪಿಟಿಯಲ್ಲಿ ಶಮೀಮಾ 2 ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ. ವಿಷಯವಾರು 8 ಮಂದಿ ವಿದ್ಯಾರ್ಥಿಗಳು ರ್ಯಾಂಕ್‌ ಪಡೆದುಕೊಂಡಿದ್ದಾರೆ. ಕಣಚೂರು ಅಲೈಡ್‌ ಹೆಲ್ತ್‌ ಸೈನ್ಸಸ್‌ ನ ಐಶ್ವರ್ಯ ಎಸ್.ಪಿ 10 ನೇ ಸ್ಥಾನ ಮುಫ್ಲಿಹಾ ೮ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಮಂಡಳಿ ಸದಸ್ಯ ಡಾ. ಇಸ್ಮಾಯಿಲ್‌, ಕೌನ್ಸಿಲ್‌ ಸದಸ್ಯ ಡಾ.ವೆಂಕಟರಾಯ ಪ್ರಭು , ಆಡಳಿತಾಧಿಕಾರಿ ಡಾ.ರೋಹನ್‌ ಮೋನಿಸ್‌ ಉಪಸ್ಥಿತರಿದ್ದರು. ದೃಶ್ಯ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News