ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಯುವಕನಿಂದ ಸೈಕಲ್‌ನ ಒಂದು ಚಕ್ರದಲ್ಲಿ ಕನ್ಯಾಕುಮಾರಿ-ಕಾಶ್ಮೀರ ಯಾತ್ರೆ
ಮಂಗಳೂರು: ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸೈಕಲ್‌ನ ಒಂದು ಚಕ್ರದಲ್ಲಿ ಕನ್ಯಾ ಕುಮಾರಿಯಿಂದ ಕಾಶ್ಮೀರ ತನಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಯಾತ್ರೆ ಕೈಗೊಂಡಿರುವ ಕಣ್ಣೂರಿನ ಸವಿತ್ ಮಂಗಳೂರಿನಿಂದ ಸೋಮವಾರ ಯಾತ್ರೆ ಮುಂದುವರಿಸಲಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಡಗ್ಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಸೇ ನೋ ಡ್ರಗ್ಸ್’ ಎಂಬ ಭಿತ್ತಿಪತ್ರವನ್ನು ಹಿಡಿದು ಸ್ನೇಹಿತರಾದ ಕಣ್ಣೂರಿನ ತಾಹೀರ್ ಮತ್ತು ಪಾಲಕ್ಕಾಡ್‌ನ ಅಭಿಷೇಕ್ ಅವರೊಂದಿಗೆ ಈ ಅಭಿಯಾನವನ್ನು ಆರಂಭಿಸಿದ್ದರು.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿರುವ ಈ ಯುವಕರು ಮಂಗಳೂರಿಗೆ ವಾರದ ಹಿಂದೆ ತಲುಪಿದ್ದರು. ಸವಿತ್ ತಂಡದ ಒಬ್ಬರು ಮುಂದೆ ಸೈಕಲ್‌ನಲ್ಲಿ ಸಾಗುತ್ತಾರೆ. ಅವರನ್ನು ಅನುಸರಿಸಿ ಸವಿತ್ ಮುಂದೆ ಸಾಗುತ್ತಾರೆ. ಇನ್ನೊಬ್ಬರು ಸವಿತ್‌ರನ್ನು ಹಿಂಬಾಲಿಸುತ್ತಾರೆ.
ಸವಿತ್ ಒಂದೇ ಚಕ್ರದ ಸೈಕಲ್‌ನಲ್ಲಿ ಸಂಚರಿಸಲು ವರ್ಷದ ತನಕ ನಿರಂತರ ಅಭ್ಯಾಸ ನಡೆಸಿದ್ದರು. ಅವರ ಪ್ರಯತ್ನ ಇದೀಗ ಯಶಸ್ವಿಯಾಗಿದೆ. ಕೇರಳದ ಬೇರೆ ಜಿಲ್ಲೆಗಳಿಗೆ ತೆರಳಿ ಡ್ರಗ್ಸ್ ವಿರುದ್ಧ ಈ ಮೂವರ ತಂಡ ಮಾದಕ ವಸ್ತು ಸೇವೆನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಸವಿತ್ ಪಾಲಿಗೆ ಇದೊಂದು ಕನಸಾಗಿದೆ. ‘‘ಒಂದೇ ಚಕ್ರದ ಸೈಕಲ್‌ನಲ್ಲಿ ಯಾರೂ ಕೂಡಾ ಈ ತನಕ ಯಾತ್ರೆಯನ್ನು ಕೈಗೊಂಡಿಲ್ಲ. ಮೊದಲ ಈ ಪ್ರಯತ್ನದಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ಭಾವಿಸುವುದಿಲ್ಲ. ಆದರೆ ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಕಾಶ್ಮೀರ ತಲುಪಿದರೆ ಅದು ಬದುಕಿನಲ್ಲಿ ನಾನು ಮಾಡುವ ದೊಡ್ಡ ಸಾಧನೆ ಯಾಗುತ್ತದೆ. ಬಹುಕಾಲದ ಕನಸು ಈಡೇರಿದಂತಾಗುತ್ತದೆ. ’’ಎಂದು ಸವಿತ್ ಹೇಳಿದ್ದಾರೆ.
ಇವತ್ತಿನ ಸಮಾಜದಲ್ಲಿ ಯುವ ಜನರು ಡ್ರಗ್ಸ್‌ಗೆ ಬಲಿಯಾಗುತ್ತಿರುವುದು ಜಾಸ್ತಿಯಾಗಿದೆ.ಡ್ರಗ್ಸ್ ಸೇವಿಸಿ ಕೊಲೆ ಮಾಡಿರುವ ಪ್ರಕರಣಗಳನ್ನು ದಿನನಿತ್ಯ ಪತ್ರಿಕೆಗಳಲ್ಲಿ ಕಂಡು ಬರುತ್ತದೆ. ಇದರ ನಿಯಂತ್ರಣ ನಮಗಿಂದು ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ನಮ್ಮ ಯಾತ್ರೆ ಆರಂಭಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಡ್ರಗ್ಸ್ ಚಟವನ್ನು ಅಂಟಿಸಿಕೊಂಡವರು ನಮ್ಮ ಪ್ರಯತ್ನದಿಂದಾಗಿ ಮುಕ್ತರಾದರೆ ಅದೇ ನಮಗೆ ಸಿಗುವ ದೊಡ್ಡ ಪ್ರತಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಅರಂಭದಲ್ಲಿ ಕಾಸರಗೋಡಿನಿಂದ ಕನ್ಯಾಕುಮಾರಿ ತನಕ ಯಾತ್ರೆ ಕೈಗೊಳ್ಳಲಾಗಿದೆ. ಬಳಿಕ ಅಲ್ಲಿಂದ ಮತ್ತೆ ಯಾತ್ರೆ ಆರಂಭಿಸಿ 2,400 ಕಿ.ಮೀ ಸಾಗಿ ಬರಲಾಗಿದೆ. ಇನ್ನೂ 4,500 ಕಿ.ಮೀ ದೂರದ ಹಾದಿಯನ್ನು ಸಾಗಬೇಕಾಗಿದೆ. ಮೊದಲ ದಿನ 15 ಕಿಮೀ ತನಕ ಯಾತ್ರೆ ಕೈಗೊಂಡಿದ್ದೆವು. ಈಗ ಪ್ರತಿನಿತ್ಯ 40-60 ಕಿಮೀ ತನಕ ಸೈಕಲ್‌ನಲ್ಲಿ ಸಂಚರಿಸುತ್ತೇವೆ. ಈ ತನಕ ಕೇರಳ ಮತ್ತು ತಮಿಳುನಾಡು ಸಾಗಿ ಬಂದಿದ್ದೇವೆ. ಈ ತನಕ ಸಾಗಿ ಬಂದಿರುವ ಹಾದಿಯಲ್ಲಿ ಮಂಗಳೂರಿನಲ್ಲಿ ಸಿಕ್ಕಿದಷ್ಟು ಬೆಂಬಲ ಎಲ್ಲೂ ಸಿಕ್ಕಿಲ್ಲ ಎಂದು ಸವಿತ್ ಹೇಳಿದ್ದಾರೆ.
ಮುಂದಿನ ನಾಲ್ಕು ತಿಂಗಳಲ್ಲಿ ಗುರಿ ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ. ಯಾತ್ರೆ ಆರಂಭಿಸುವಾಗ ಕೈಯಲ್ಲಿ ಕೇವಲ 2 ಸಾವಿರ ರೂ. ಇತ್ತು. ಬೇರೆ ಬೇರೆ ಸಂಸ್ಥೆಗಳು ನಮಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಸವಿತ್ ತಿಳಿಸಿದ್ದಾರೆ.