ತುಂಬೆ ಅಣೆಕಟ್ಟಿನ ಒಳಹರಿವು ತೀವ್ರ ಕುಸಿತ: ಗೇಟ್ ಬಂದ್; ಅಣೆಕಟ್ಟಿನ ಕೆಳಭಾಗದಿಂದ ನೀರೆತ್ತಲು ಸಿದ್ಧತೆ
ಮಂಗಳೂರು, ಫೆ.26: ಕಳೆದೆರಡು ತಿಂಗಳಿನಿಂದ ತೀವ್ರಗೊಳ್ಳುತ್ತಿರುವ ಬಿಸಿಲಿನ ಝಳ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಆತಂಕವನ್ನೂ ಹೆಚ್ಚಿಸಿದೆ. ಈಗಾಗಲೇ ನಗರದ ಹಲವು ಕಡೆಗಳಲ್ಲಿ ನೀರು ಪೂರೈಕೆಯಲ್ಲಾಗುತ್ತಿರುವ ತೊಂದರೆಯಿಂದ ನೀರಿನ ಸಮಸ್ಯೆ ಕಾಡುತ್ತಿರುವಂತೆಯೇ, ತುಂಬೆ ಅಣೆಕಟ್ಟಿಗೆ ನೀರಿನ ಒಳಹರಿವು ಕೂಡಾ ತೀವ್ರ ಕುಸಿದಿದೆ.
ಕಳೆದ ಶುಕ್ರವಾರದಿಂದ ತುಂಬೆ ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟ್ಗಳನ್ನು ಬಂದ್ ಮಾಡಲಾಗಿದ್ದು, ಸದ್ಯ 6 ಮೀಟರ್ ನೀರು ಸಂಗ್ರಹವಿದೆ. ಆದರೆ ಒಳಹರಿವು ಕಳೆದ ಕೆಲ ದಿನಗಳಿಂದ ಶೇ.90ರಷ್ಟು ಕುಸಿತವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಅಣೆಕಟ್ಟಿನ ಕೆಳಭಾಗದಿಂದ ನೀರೆತ್ತಲು ಪಂಪ್ ಅಳವಡಿಕೆ
ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರನ ಸರಬರಾಜಿನಲ್ಲಿ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಪಾಲಿಕೆ ಆಯುಕ್ತ ಆನಂದ್ ಅವರ ಸೂಚನೆ ಮೇರೆಗೆ ಅಣೆಕಟ್ಟಿನ ಕೆಳಭಾಗದಿಂದ ನೀರನ್ನು ಡ್ಯಾಂಗೆ ಹರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಈ ಸಂಬಂಧ ಡ್ಯಾಂಗೆ ನೀರು ಪಂಪ್ ಮಾಡಲು ಅಣೆಕಟ್ಟಿನ ಕೆಳಭಾಗದಲ್ಲಿ ಹೆಚ್ಚುವರಿ ಪಂಪ್ ಗಳನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪಾಲಿಕೆ ಆಯುಕ್ತ ಆನಂದ್ ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದಾರೆ.